ಇಲ್ಲಿ ನಂಬಿಕೆಯ ನಿಜವಾದ ಸತ್ವ ಪರೀಕ್ಷೆ ನಡೆಯುತ್ತದೆ. ರಾಜಸ್ತಾನದ ಬಿಕನೇರ್ ನಿಂದ 30 ಕಿಮೀ ದೂರದಲ್ಲಿರೋ ಕರ್ಣಿ ಮಾತಾ ದೇವಾಲಯ ಇದು. ಇದನ್ನು ಇಲಿಗಳ ದೇವಸ್ಥಾನವೆಂದೇ ಕರೆಯುತ್ತಾರೆ. ಈ ದೇವಾಲಯದ ಆವರಣದಲ್ಲಿ 30,000ಕ್ಕೂ ಅಧಿಕ ಇಲಿಗಳಿವೆ.
ವಿಶೇಷ ಅಂದ್ರೆ ಇಲಿಗಳು ಅರ್ಧ ತಿಂದುಬಿಟ್ಟ ಪ್ರಸಾದವನ್ನು ಭಕ್ತರು ಸೇವಿಸ್ತಾರೆ. ಅದನ್ನು ತಿಂದ ಭಕ್ತರಿಗೆ ಇದುವರೆಗೂ ಯಾವುದೇ ರೀತಿಯ ಅಪಾಯವಾಗಿಲ್ಲ, ಅನಾರೋಗ್ಯಕ್ಕೆ ತುತ್ತಾಗಿಲ್ಲ.
ನೀರು ಕುಡಿಯಲು ಹೋಗಿದ್ದ ಕರ್ಣಿ ಮಾತಾಳ ಪುತ್ರ ಸರೋವರದಲ್ಲಿ ಮುಳುಗಿಬಿಟ್ಟಿದ್ದನಂತೆ. ಆತನನ್ನು ಬದುಕಿಸುವಂತೆ ಕರ್ಣಿ ಮಾತಾ ಯಮರಾಜನ ಬಳಿ ಪ್ರಾರ್ಥಿಸಿದ್ದಳು.
ಇದಕ್ಕೆ ಸಮ್ಮತಿಸಿದ ಯಮರಾಜ, ಕರ್ಣಿ ಮಾತೆಯ ಮಗನಿಗೆ ಇಲಿಯ ರೂಪದಲ್ಲಿ ಪುನರ್ಜನ್ಮ ನೀಡಿದ್ದ ಎಂಬ ಪುರಾಣವಿದೆ. ಹಾಗಾಗಿ ಈ ಇಲಿಗಳಿಗೆಲ್ಲ ಕರ್ಣಿ ಮಾತಾ ತಾಯಿ ಎಂಬ ನಂಬಿಕೆ ಇದೆ.
ದೇವಾಲಯದ ತುಂಬೆಲ್ಲಾ ಓಡಾಡಿಕೊಂಡಿರೋ ಇಲಿಗಳು, ಪ್ರಸಾದ ತಿಂದೇ ಬದುಕುತ್ತವೆ. ಆದ್ರೆ ಬಿಳಿ ಇಲಿಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿವೆ. ಯಾರಿಗೆ ಬಿಳಿ ಇಲಿಯ ದರ್ಶನವಾಗುತ್ತದೆಯೋ ಅವರಿಗೆ ಜೀವನಪೂರ್ತಿ ಕರ್ಣಿ ಮಾತಾಳ ಆಶೀರ್ವಾದ ಲಭಿಸುತ್ತದೆ ಎಂಬ ನಂಬಿಕೆಯಿದೆ. ಆಕಸ್ಮಿಕವಾಗಿ ನಿಮ್ಮ ಕಾಲಡಿಯಲ್ಲಿ ಸಿಕ್ಕು ಇಲಿ ಮೃತಪಟ್ಟರೆ ಆ ಪಾಪಕ್ಕೆ ನೀವು ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಬೆಳ್ಳಿ ಅಥವಾ ಚಿನ್ನದ ಇಲಿಯನ್ನು ಕಾಣಿಕೆಯಾಗಿ ನೀಡಿ ಹರಕೆ ತೀರಿಸಬೇಕು.
ಕರ್ಣಿ ಮಾತಾ ದುರ್ಗಾದೇವಿಯ ಒಂದು ರೂಪ ಎನ್ನುತ್ತಾರೆ ಭಕ್ತರು. ಕರ್ಣಿ ಮಾತಾ ರಾಜಸ್ತಾನದ ರಿಘುಬೈನಲ್ಲಿ ಜನ್ಮ ತಳೆದಳು ಎನ್ನಲಾಗುತ್ತದೆ. ಭಾರತದಲ್ಲಿ ಇಲಿಗಳನ್ನೂ ಪೂಜಿಸುವ ವಿಶಿಷ್ಟ ದೇವಾಲಯ ಇದು. ನಿತ್ಯ ನೂರಾರು ಭಕ್ತರು ಇಲ್ಲಿಗೆ ಬಂದು ಇಲಿಗಳ ಎಂಜಲು ಪ್ರಸಾದವನ್ನು ಸೇವಿಸಿ ಕೃತಾರ್ಥರಾಗುತ್ತಾರೆ.