ಬೆಂಗಳೂರು : ವರ್ಷದ 365 ದಿನಗಳೂ ಕೂಡ ಹೂಡಿಕೆದಾರರಿಗೆ ಕರ್ನಾಟಕದ ಬಾಗಿಲು ತೆರೆದಿರುತ್ತದೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಸಮಾರೋಪದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು.
ಈ ಸಮಾವೇಶವು ಕರ್ನಾಟಕದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಬಂಡವಾಳ ಹೂಡಿಕೆ ವಿಚಾರದಲ್ಲಿ ಕರ್ನಾಟಕ ದೇಶದ ಇತರ ನಗರಗಳ ಜತೆ ಸ್ಪರ್ಧೆ ಮಾಡುತ್ತಿಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಇಡೀ ದೇಶದಲ್ಲೇ ಮೊದಲು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭಿಸಿದರು. ಈ ಸಮಾವೇಶ ಒಂದು ಆರಂಭವಷ್ಟೇ, ವರ್ಷದ 365 ದಿನಗಳೂ ಕೂಡ ಹೂಡಿಕೆದಾರರಿಗೆ ಕರ್ನಾಟಕದ ಬಾಗಿಲು ತೆರೆದಿರುತ್ತದೆ.
ಈ ಸಮಾವೇಶದಲ್ಲಿ ಅನೇಕ ಒಪ್ಪಂದಗಳು, ಚರ್ಚೆಗಳು ನಡೆದಿವೆ. ಕನ್ನಡ ನಾಡಿಗೆ ಉದ್ಯಮ ಆರಂಭಿಸಲು ಬಂದವರು ಬರಿಗೈನಲ್ಲಿ ಹೋಗುವುದಿಲ್ಲ. ರಾಜ್ಯದ ಮೇಲೆ ಎಲ್ಲ ಉದ್ಯಮಿಗಳಿಗೂ ವಿಶ್ವಾಸವಿದೆ.
ನಮ್ಮ ನೂತನ ಕೈಗಾರಿಕಾ ನೀತಿಯು ಬೆಂಗಳೂರಿನ ಹೊರತಾಗಿ ರಾಜ್ಯದ ಇತರ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ನವೀನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ರಾಜ್ಯದಲ್ಲಿ 300 ಕಿ.ಮೀ ಕರಾವಳಿ ಪ್ರದೇಶವಿದ್ದು, ಈ ಭಾಗದಲ್ಲಿ ನಮ್ಮ ಐತಿಹಾಸಿಕ ಸ್ಥಳಗಳನ್ನು ಉಳಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು ಎಂದರು.