ಬೆಂಗಳೂರು: ರಾಜ್ಯದ ವೃದ್ದರೊಬ್ಬರು ಮೂರು ಬೇರೆ ಬೇರೆ ಕಂಪನಿಗಳಲ್ಲಿ ಬರೋಬ್ಬರಿ 100 ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದ್ದು ಅತಿ ಸರಳ ಜೀವನ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಾಜೀವ್ ಮೆಹ್ತಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ಮೂಲದ ವೃದ್ಧರೊಬ್ಬರು 100 ಕೋಟಿಗೂ ಅಧಿಕ ಷೇರುಗಳನ್ನು ಹೊಂದಿದ್ದು, ಸ್ವತಃ ಹಿರಿಯ ವ್ಯಕ್ತಿಯೇ ಈ ಬಗ್ಗೆ ಮಾತನಾಡಿದ್ದಾರೆ.
ನನ್ನ ಬಳಿ 27,855 ಎಲ್ ಆಂಡ್ ಟಿ ಷೇರುಗಳು, 2,475 ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಮತ್ತು 4000 ಕರ್ನಾಟಕ ಬ್ಯಾಂಕ್ ಷೇರುಗಳಿವೆ. ಈ ಷೇರುಗಳಿಂದ ನಾನು ಪ್ರತಿವರ್ಷ 6,15,000 ರೂಪಾಯಿ ಲಾಭಾಂಶವನ್ನು ಗಳಿಸುತ್ತೇನೆ ಎಂದು ಹೇಳಿದ್ದಾರೆ.
ಈಗಿನ ವಹಿವಾಟಿನ ಪ್ರಕಾರ ಅವರು 80 ಕೋಟಿ ರೂ ಮೌಲ್ಯದ ಎಲ್ ಆಂಡ್ ಟಿ ಷೇರುಗಳನ್ನು 21 ಕೋಟಿ ರೂ ಮೌಲ್ಯದ ಅಲ್ಟ್ರಾಟೆಕ್ ಷೇರುಗಳನ್ನು ಮತ್ತು 1 ಕೋಟಿ ಮೌಲ್ಯದ ಕರ್ನಾಟಕ ಬ್ಯಾಂಕ್ ಷೇರುಗಳನ್ನು ಹೊಂದಿದ್ದಾರೆ ಎಂದು ರಾಜೀವ್ ಮೆಹ್ತಾ ತಿಳಿಸಿದ್ದಾರೆ. ಇಷ್ಟೊಂದು ಷೇರುಗಳನ್ನು ಹೊಂದಿದ್ದರೂ ಹಿರಿಯ ವ್ಯಕ್ತಿ ನಡೆಸುತ್ತಿರುವ ಸರಳ ಜೀವನಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋಗೆ ಕ್ಯಾಪಿಟಲ್ ಮೈಂಡ್ ಸಂಸ್ಥಾಪಕ ದೀಪಕ್ ಶೆಣೈ ಪ್ರತಿಕ್ರಿಯಿಸಿದ್ದು, ದಯವಿಟ್ಟು ಈ ರೀತಿ ಪೋಸ್ಟ್ ಮಾಡುವಾಗ ಅವರ ಮುಖವನ್ನು ಮಸುಕುಗೊಳಿಸಿ. ಇಂಥಹ ಪ್ರಚಾರದಿಂದ ಸಾಮಾನ್ಯವಾಗಿ ಸರಳ ಜೀವನ ನಡೆಸುವ ವೃದ್ಧರಿಗೆ ಸಮಸ್ಯೆಯಾಗಬಹುದು ಎಂದು ಸಲಹೆ ನೀಡಿದ್ದಾರೆ.
ಅಲ್ಲದೇ ಹಲವರು ಈ ರೀತಿ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದರಿಂದ ಸರಳ ಜೀವನ ನಡೆಸುವ ವ್ಯಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಜನರು ಅವರನ್ನು ಸಂಪರ್ಕಿಸಲು ಪ್ರಾರಂಭಿಸುತಾರೆ ಎಂದು ಕಮೆಂಟ್ ಮಾಡಿದ್ದಾರೆ.