ಬೆಂಗಳೂರು: ರಾಜ್ಯದಲ್ಲಿ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಬಂದು ಬರ ಅಧ್ಯಯನ ಮಾಡಿದ ಬೆನ್ನಲ್ಲೇ ಈಗ ಬಿಜೆಪಿ ಕೂಡ ಬರ ಅಧ್ಯಯನಕ್ಕೆ ನಿರ್ಧರಿಸಿದೆ.
ರಾಜ್ಯದ 216 ತಾಲೂಕುಗಳಲ್ಲಿ ಬರ ಆವರಿಸಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರ ಎಂದು 4860 ಕೋಟಿ ರೂಪಾಯಿ ಘೋಷಣೆ ಮಾಡಿದೆ. ಆದರೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಬಿಜೆಪಿ ಘಟಕ ಬರ ಅಧ್ಯಯನಕ್ಕೆ ತಂಡ ರಚನೆ ಮಾಡಿದೆ. ರಾಜ್ಯದ ಬರ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಮುಂದಿನ ವಾರ ಬರ ಅಧ್ಯಯನದ ಪ್ರವಾಸ ನಿಗದಿಯಾಗಲಿದೆ.
ಬಿಜೆಪಿಯ 16 ನಾಯಕರ ತಂಡದಿಂದ ರಾಜ್ಯದಲ್ಲಿ ಬರ ಅಧ್ಯಯನ ನಡೆಯಲಿದೆ. ಇನ್ನು ಬರ ಅಧ್ಯಯನ ತಂಡದಲ್ಲಿ ಎಸ್.ಟಿ.ಸೋಮಶೇಖರ್, ರೇಣುಕಾಚಾರ್ಯ, ವಿ.ಸೋಮಣ್ಣಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.