ಬೆಂಗಳೂರು: ಕೋವಿಡ್ ವಾರ್ ರೂಂ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣ ಕೆಲಸಕ್ಕೆ ನಲಪಾಡ್ ಹಾಗೂ ಆತನ ಬೆಂಬಲಿಗರು ಅಡ್ಡಿಪಡಿಸಿದ್ದಲ್ಲದೇ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ ನಲಪಾಡ್ ಕಡೆಯ 5 ಜನರ ಗುಂಪು ಕಚೇರಿಗೆ ಆಗಮಿಸಿ ಬಾಸ್ ತಂಟೆಗೆ ಬಂದರೆ ಕೆಲಸ ಮಾಡಲು ಬಿಡುವುದಿಲ್ಲ ಎಂದು ಗೂಂಡಾಗಿರಿ ಮೆರೆದಿದ್ದಾರೆ. ಹೀಗಾಗಿ ರಕ್ಷಣೆ ನೀಡಬೇಕು ಎಂದು ಕೋರಿ ಭವ್ಯಾ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಲ್ಲದೇ ಉಪಚುನಾವಣೆ ಸಂದರ್ಭದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾಗಿ ಕೂಡ ದೂರಿದ್ದಾರೆ. ನಲಪಾಡ್ ಹಾಗೂ ಆತನ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭವ್ಯಾ ಆಗ್ರಹಿಸಿದ್ದಾರೆ.