ಟ್ರಾವೆಲ್ ಏಜೆನ್ಸಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ ಇಬ್ಬರು ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಹಿಳೆ ಗೆಲುವು ಸಾಧಿಸಿದ್ದಾಳೆ. ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿದ್ದ ಮಹಿಳೆಗೆ ಟ್ರಾವೆಲ್ ಏಜೆನ್ಸಿ ಮಾಡಿದ ಯಡವಟ್ಟು ದುಬಾರಿಯಾಗಿತ್ತು.
ಭಾರತಿ ಟಿ ಎಂಬ ಮಹಿಳೆ 2017ರಲ್ಲಿ ಸಿಂಗಾಪುರ, ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವ ಖುಷಿಯಲ್ಲಿದ್ದರು. ಜೈ ಭಾರತಿ ನಗರದಲ್ಲಿರುವ ಸೂನಂಗಿ ಟ್ರಾವೆಲ್ಸ್ ಆಂಡ್ ಟೂರ್ಸ್ ಪ್ರೈವೇಟ್ ಲಿಮಿಟೆಡ್ ಸಂಪರ್ಕಿಸಿದ್ದರು. ಪ್ರವಾಸಕ್ಕಾಗಿ ಭಾರತಿ 96,000 ರೂಪಾಯಿ ಪಾವತಿ ಮಾಡಿದ್ದರು. ನಾಲ್ಕೈದು ದಿನಗಳಲ್ಲಿ ವೀಸಾ ಬಂತು. ಆದ್ರೆ ವೀಸಾದಲ್ಲಿ ಮಹಿಳೆ ಬದಲು ಪುರುಷ ಎಂದು ನಮೂದಿಸಲಾಗಿತ್ತು. ತಕ್ಷಣ ಟ್ರಾವೆಲ್ ಏಜೆನ್ಸಿಗೆ ಮಾಹಿತಿ ನೀಡಿದ್ದರು. ತಕ್ಷಣ ಸಮಸ್ಯೆ ಪರಿಹರಿಸುವ ಭರವಸೆಯನ್ನು ಟ್ರಾವೆಲ್ ಏಜೆನ್ಸಿ ನೀಡಿತ್ತು.
ಆದ್ರೆ ಪ್ರವಾಸದ ದಿನಾಂಕ ಬಂದ್ರೂ ಹೊಸ ವೀಸಾ ಕೈ ಸೇರಲಿಲ್ಲ. ಇದ್ರಿಂದ 45 ವರ್ಷದ ಮಹಿಳೆ ಪ್ರವಾಸ ರದ್ದು ಮಾಡಬೇಕಾಯ್ತು. ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದರು. ಆದ್ರೆ ಏಜೆನ್ಸಿ 32 ಸಾವಿರ ಮಾತ್ರ ನೀಡುವುದಾಗಿ ಹೇಳಿತ್ತು. ಇದಕ್ಕಾಗಿ ಗ್ರಾಹಕರ ವೇದಿಕೆಗೆ ಹೋದ ಮಹಿಳೆ ಈಗ ಜಯ ಸಾಧಿಸಿದ್ದಾರೆ. 96 ಸಾವಿರದ ಜೊತೆ 10 ಸಾವಿರ ದಂಡ ರೂಪದಲ್ಲಿ ಹಾಗೂ 5 ಸಾವಿರ ಕಾನೂನು ಹೋರಾಟದ ಶುಲ್ಕವಾಗಿ ನೀಡುವಂತೆ ಹೇಳಿದೆ.
ಇದೇ ನ್ಯಾಯಾಲಯ ಬಿ.ಕೆ.ರವಿ ಎಂಬುವವರ ಪ್ರಕರಣದ ತೀರ್ಪು ನೀಡಿದೆ. ಮೇಕ್ ಮೈ ಟ್ರಿಪ್ ವಿರುದ್ಧ ದೂರು ಸಲ್ಲಿಸಿದ್ದರು. ರವಿ ಸೇರಿದಂತೆ ಮನೆಯ ನಾಲ್ಕು ಮಂದಿಯ ಪೂರ್ತಿ ಹೆಸರನ್ನು ಟಿಕೆಟ್ ನಲ್ಲಿ ನಮೂದಿಸಲು ಅನುಮತಿ ಸಿಕ್ಕಿರಲಿಲ್ಲ. ಹಾಗಾಗಿ ರವಿ ಬೆಂಗಳೂರಿನಿಂದ ಪೋರ್ಟ್ ಬ್ಲೇರ್ ಗೆ ಹೋಗಬೇಕಿದ್ದ ಪ್ಲಾನ್ ರದ್ದು ಮಾಡಿದ್ದರು. ಮೇಕ್ ಮೈ ಟ್ರಿಪ್ ಗೆ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.