ಕೊರೊನಾ ಸೋಂಕಿತರ ಮಾಹಿತಿಯನ್ನ ಗೌಪ್ಯವಾಗಿ ಇಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಅದರೂ ಸಹ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಮಾಹಿತಿ ಸೋರಿಕೆಯಾಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ.
ಕೋರಮಂಗಲ ನಿವಾಸಿ ರೇಖಾ ರಾವ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದರು. ಸೋಂಕಿಗೆ ಒಳಗಾದ ಕೆಲವೇ ಗಂಟೆಗಳಲ್ಲಿ ಅವರ ಮೊಬೈಲ್ಗೆ ಸ್ಯಾನಿಟೈಸೇಶನ್ ಕಂಪನಿಯಿಂದ ಕರೆ ಬಂದಿದೆ.
ಮೊದಲು ಅದು ಬಿಬಿಎಂಪಿ ಕರೆ ಇರಬಹುದು ಅಂತಾ ರೇಖಾ ಭಾವಿಸಿದ್ದರು. ಆದರೆ ಬಳಿಕ ಅದು ಖಾಸಗಿ ಕಂಪನಿ ಕರೆ ಎಂದು ರೇಖಾರ ಗಮನಕ್ಕೆ ಬಂದಿದೆ. ನನ್ನ ನಂಬರ್ ನಿಮಗೆ ಹೇಗೆ ಸಿಗ್ತು ಅಂತಾ ರೇಖಾ ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಖಾಸಗಿ ಕಂಪನಿ ವಿಫಲವಾಗಿದೆ.
ಬೆಂಗಳೂರಿನ ಪ್ರೋಗಾಮರ್ ಶಶಿ ಸಾಹ್ ಟ್ವಿಟರ್ನಲ್ಲಿ ಕೋವಿಡ್ ವಾರ್ ರೂಂನ ಅಭದ್ರತೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 24ರಂದು ಬನ್ನೇರುಘಟ್ಟ ರಸ್ತೆಯಲ್ಲಿರುವ ಸಾಹ್ ಅಪಾರ್ಟ್ಮೆಂಟ್ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಸಾಹ್ ಕೂಡ ಕೊರೊನಾ ಟೆಸ್ಟ್ಗೆ ಒಳಗಾಗಿದ್ದರು. ಆದರೆ ಬಿಬಿಎಂಪಿ 5 ದಿನಗಳಾದರೂ ಸಂಪರ್ಕಿಸದ ಕಾರಣ ಕೋವಿಡ್ ವಾರ್ ರೂಂನಲ್ಲಿ ಎಸ್ಆರ್ಎಫ್ಐಡಿ ನಂಬರ್ನ್ನು ನಮೂದಿಸಿ ತಮ್ಮ ಫಲಿತಾಂಶವನ್ನ ವೀಕ್ಷಿಸಿದ್ದರು.
ತಮ್ಮ ಎಸ್ಆರ್ಎಫ್ಐಡಿ ನಂಬರ್ನ ಕೊನೆಯ ಅಂಕಿಗಳನ್ನ ಬದಲಿಸಿ ನೋಡಿದ್ರೆ ವೆಬ್ ಸೈಟ್ ಬೇರೆ ರೋಗಿಗಳ ಮಾಹಿತಿಯನ್ನೂ ನೀಡಲು ಆರಂಭಿಸಿದೆ. ಇದರ ಬಗ್ಗೆ ಸಾಹ್ ತನಿಖೆ ನಡೆಸಿದಾಗ ಕೋವಿಡ್ ವಾರ್ ರೂಂ ವೆಬ್ಸೈಟ್ನ ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್ಫೇಸ್ ಸಾರ್ವಜನಿಕವಾಗಿದೆ ಎಂಬ ಅಂಶ ತಿಳಿದುಬಂದಿದೆ.