ಮಂಡ್ಯ: ಹೆಲ್ಮೆಟ್ ಧರಿಸದೇ ಯುವತಿಯೋರ್ವಳು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ತಡೆದು ನಿಲ್ಲಿಸಿದ ಮಹಿಳಾ ಪಿ ಎಸ್ ಐ ಬೈಕ್ ನ ದಾಖಲೆ ಪತ್ರಗಳನ್ನು ನೀಡುವಂತೆ ಕೇಳಿ ಯುವತಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಮಂಡ್ಯದ ಬೆಸಗರಹಳ್ಳಿಯಲ್ಲಿ ನಡೆದಿದೆ.
ಮಹಿಳಾ ಪಿ ಎಸ್ ಐ ಸವಿತಾಗೌಡ ಪಾಟೀಲ್ ಯುವತಿ ಕಪಾಳಕ್ಕೆ ಹೊಡೆದಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಬೆನ್ನಲ್ಲೇ ಡಿವೈ ಎಸ್ ಪಿ ಬಳಿ ಮಂಡ್ಯ ಎಸ್ ಪಿ ಅಶ್ವಿನಿ ವರದಿ ಕೇಳಿದ್ದು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲ್ದೇ ಸಾರ್ವಜನಿಕರು ಕೂಡ ಕಾನೂನು, ಸುವ್ಯವಸ್ಥೆ ನಿಟ್ಟಿನಲ್ಲಿ ಪೊಲೀಸರಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಯುವತಿ ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಲಾಯಿಸುತ್ತಿದ್ದರು. ಈ ವೇಳೆ ಪೊಲೀಸರು ಯುವತಿ ವಾಹನ ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಯುವತಿಯ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಮಹಿಳಾ ಪಿ ಎಸ್ ಐ ಯುವತಿಗೆ ಕಪಾಳಮೋಕ್ಷ ಮಾಡಿದ್ದಾರೆ.