ದಾವಣಗೆರೆ: ಜಿಲ್ಲಾ ಮಹಿಳಾ ಅಭಿವೃದ್ಧಿ ನಿಗಮದ 2019-20ನೇ ಸಾಲಿನ ಸಮೃದ್ಧಿ ಯೋಜನೆಯ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಪೌರ ಸಂಸ್ಥೆಗಳ ವ್ಯಾಪಾರ ಪರವಾನಿಗೆ ಪಡೆದು ಬೀದಿ ಬದಿ ವ್ಯಾಪಾರ ಮಾಡುತ್ತಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳಾ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮೃದ್ಧಿ ಯೋಜನೆಯಡಿ ನಗರ ಹಾಗೂ ಗ್ರಾಮೀಣ ಪ್ರದೇಶದ ಬೀದಿ ಬದಿಯ ಮಹಿಳಾ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಒಬ್ಬ ಫಲಾನುಭವಿ ಕೇವಲ ಒಂದು ಬಾರಿ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಫಲಾನುಭವಿಗಳಿಗೆ ಇರಬೇಕಾದ ಅರ್ಹತೆಗಳು: ಪರಿಶಿಷ್ಟ ಪಂಗಡದ ಮಹಿಳೆಯರಾಗಿದ್ದು, 18 ರಿಂದ 60 ವರ್ಷದವರಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್. ಕಾರ್ಡ್‍ಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿರಬೇಕು. ಖಾತೆಯು ಆಧಾರ್ ಸೀಡಿಂಗ್ ಆಗಿದ್ದು, ಚಾಲ್ತಿಯಲ್ಲಿರಬೇಕು.
ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿನ ಬೀದಿ ಬದಿ ಮಹಿಳಾ ವ್ಯಾಪಾರಿಗಳು ಪಿ.ಡಿ.ಓ ಅವರಿಂದ ಬೀದಿ ಬದಿ ವ್ಯಾಪಾರಿ ಎಂದು ದೃಢೀಕರಿಸಿದ ದಾಖಲೆಯನ್ನು ಪಡೆದಿರಬೇಕು. ಜೊತೆಗೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಬೀದಿ ಬದಿ ಮಹಿಳಾ ವ್ಯಾಪಾರಿಗಳು ಮಹಾನಗರ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಪೌರಾಡಳಿತ ಇಲಾಖೆಯಲ್ಲಿ ‘ಬೀದಿ ಬದಿ ವ್ಯಾಪಾರಿ’ ಎಂದು ನೊಂದಣಿ ಮಾಡಿಸಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು.
ಅರ್ಜಿಗಳನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದಾಗಿದೆ. ಜೂನ್ 25 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂನ್ 25 ರ ನಂತರ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಮಾಹಿತಿ ಇರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಫಲಾನುಭವಿಗಳನ್ನು ಜಿಲ್ಲಾಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08192-296268 ನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದೆಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕರು ತಿಳಿಸಿದ್ದಾರೆ.