ಬೆಂಗಳೂರು: ಅತ್ಯಾಚಾರದ ನಂತರ ಸುಸ್ತಾಗಿ ನಿದ್ದೆ ಮಾಡಿದೆ. ಇದರಿಂದಾಗಿ ದೂರು ನೀಡುವುದು ವಿಳಂಬವಾಯಿತು ಎಂದು ಮಹಿಳೆಯೊಬ್ಬರು ಹೇಳಿರುವದನ್ನು ಹೈಕೋರ್ಟ್ ಒಪ್ಪಿಲ್ಲ. ಈ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ಬೆಂಗಳೂರಿನ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದು ಬಂಧನ ಭೀತಿ ಎದುರಿಸುತ್ತಿದ್ದ 27 ವರ್ಷದ ವ್ಯಕ್ತಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರ ಆರೋಪವಿರುವ ಒಂದೇ ಕಾರಣಕ್ಕೆ ಆತನ ಸಾತಂತ್ರ್ಯ ನಿರ್ಬಂಧಿಸಲಾಗದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟಿದ್ದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ಅತ್ಯಾಚಾರದ ನಂತರ ಸುಸ್ತಾಗಿ ನಿದ್ದೆ ಮಾಡುವುದು ಭಾರತೀಯ ಮಹಿಳೆಯರ ಸಹಜ ಪ್ರತಿಕ್ರಿಯೆ ಅಲ್ಲವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆರೋಪಿತ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಕೂಡಲೇ ದೂರು ನೀಡಿಲ್ಲ. ಆತನೊಂದಿಗೆ ತಡ ರಾತ್ರಿ 11 ಗಂಟೆಗೆ ಕಚೇರಿಗೆ ಹೋಗಿದ್ದು ಏಕೆ? ಆರೋಪಿಯೊಂದಿಗೆ ಮದ್ಯ ಸೇವಿಸಿದ್ದು ಏಕೆ ಎಂಬುದಕ್ಕೆ ಮಹಿಳೆ ಸರಿಯಾದ ವಿವರಣೆ ನೀಡಿಲ್ಲ ಎಂದು ಹೇಳಲಾಗಿದೆ.
ಬೆಳಗಿನ ಜಾವದವರೆಗೆ ತನ್ನ ಜೊತೆಗೆ ಇರಲು ವ್ಯಕ್ತಿಗೆ ಅನುಮತಿ ನೀಡಿರುವ ಬಗ್ಗೆ ಮಹಿಳೆ ಸೂಕ್ತ ಕಾರಣ ನೀಡಿಲ್ಲ. ಅತ್ಯಾಚಾರದ ನಂತರ ಸುಸ್ತಾಗಿ ನಿದ್ರಿಸಿದೆ ಎಂದು ದೂರಿನಲ್ಲಿ ತಿಳಿಸಿರುವುದನ್ನು ನಂಬಲಾಗದು ಎಂದು ಹೇಳಿದೆ. ಸಂತ್ರಸ್ತೆ ನಡೆಸುತ್ತಿರುವ ಮ್ಯಾನ್ ಪವರ್ ಏಜೆನ್ಸಿಯಲ್ಲಿ ಆರೋಪಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಮೇ 9ರಂದು ರಾಜರಾಜೇಶ್ವರಿ ಠಾಣೆಗೆ ಮಹಿಳೆ ದೂರು ನೀಡಿದ್ದರು. ಏಪ್ರಿಲ್ 22ರಂದು ಆರೋಪಿ ತನ್ನೊಂದಿಗೆ ಕಾರ್ ನಲ್ಲಿ ಕಚೇರಿಗೆ ಬಂದು ಅತ್ಯಾಚಾರ ಎಸಗಿದ್ದು, ತನ್ನ ಬೆತ್ತಲೆ ಚಿತ್ರಗಳನ್ನು ಕಳುಹಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದರು.