ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಂತೂ ಕೊರೊನಾ ಕೇಸ್ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಂ ಹೋಂ ಅವಧಿಯನ್ನ ಇನ್ನೂ ಮೂರು ತಿಂಗಳು ಮುಂದೂಡಿವೆ. ಹೆಚ್ಚಿನ ಕಂಪನಿಗಳು ಮಾರ್ಚ್ 31ಕ್ಕೆ ವರ್ಕ್ ಫ್ರಂ ಹೋಂ ಅವಧಿಯನ್ನ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದವು. ಆದರೆ ಇದೀಗ ಅನವಶ್ಯಕವಾಗಿ ಕಂಪನಿ ಕಡೆಗೆ ಬರಬೇಡಿ ಎಂದು ಸಿಬ್ಬಂದಿಗೆ ಇಮೇಲ್ ಮಾಡುತ್ತಿದ್ದಾರೆ. ಇತ್ತ ಸರ್ಕಾರಿ ನೌಕರರೂ ಕೂಡ ತಮಗೆ ವರ್ಕ್ ಫ್ರಂ ಹೋಂ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಮುಂಚೂಣಿ ಐಟಿ ಕಂಪನಿಗಳು ಮಾರ್ಚ್ 31ರವೆಗೆ ವರ್ಕ್ ಫ್ರಂ ಹೋಂಗೆ ಸೂಚನೆ ನೀಡಿದ್ದವು. ಆದರೆ ಸೋಮವಾರ ವರ್ಕ್ ಫ್ರಂ ಹೋಂ ಅವಧಿಯನ್ನ ಮುಂದಿನ ಮೂರು ತಿಂಗಳುಗಳ ಕಾಲ ಮುಂದೂಡಿರೋದಾಗಿ ಸಿಬ್ಬಂದಿಗೆ ಇ ಮೇಲ್ ಕಳುಹಿಸಿವೆ. ಇನ್ವೆಸ್ಟ್ಮೆಂಟ್ ಬ್ಯಾಂಕ್ ಹಾಗೂ ಫೈನಾನ್ಸ್ ಸರ್ವೀಸ್ ಸಿಬ್ಬಂದಿಗೆ ಬುಧವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಕಂಪನಿಗಳು ನಿರ್ದೇಶಿಸಿದ್ವು. ಹೆಚ್ಚಿನ ಕಂಪನಿಗಳು ಜೂನ್ ಹಾಗೂ ಸೆಪ್ಟೆಂಬರ್ವರೆಗೆ ವರ್ಕ್ ಫ್ರಂ ಹೋಂ ಅವಧಿಯನ್ನ ವಿಸ್ತರಿಸಿವೆ ಎಂದು ನಾಸ್ಕೊಮ್ ಉಪಾಧ್ಯಕ್ಷ ಕೆ.ಎಸ್. ವಿಶ್ವನಾಥನ್ ಹೇಳಿದ್ರು.
ಕಳೆದ ಒಂದು ವರ್ಷದಿಂದ ಐಟಿ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಿದ್ದವು. ಇದರಿಂದ ಕೆಲಸದ ಗುಣಮಟ್ಟದಲ್ಲಿ ಸಿಕ್ಕಾಪಟ್ಟೆ ರಾಜಿಯಾಗಬೇಕಾಗಿತ್ತು. ಐಟಿ ಕಂಪನಿಗಳು ಹೊಸ ಪ್ರಾಜೆಕ್ಟ್, ಸಿಬ್ಬಂದಿ ನೇಮಕಾತಿಗಳನ್ನ ಮುಂದುವರಿಸಿವೆ ಎಂದು ವಿಶ್ವನಾಥನ್ ಹೇಳಿದ್ದಾರೆ. ಇತ್ತ ರಾಜ್ಯ ಸರ್ಕಾRI ನೌಕರರು ಕೂಡ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಬಳಿ ವರ್ಕ್ ಫ್ರಂ ಹೋಂ ಸೌಕರ್ಯಕ್ಕೆ ಅವಕಾಶ ಕೇಳ್ತಿದ್ದಾರೆ. ಇಲ್ಲವಾದಲ್ಲಿ 50 ಪ್ರತಿಶತ ಹಾಜರಿ ವಿಧಾನವನ್ನಾದರೂ ಜಾರಿಗೆ ತನ್ನಿ ಎಂದು ಮನವಿ ಮಾಡುತ್ತಿದ್ದಾರೆ.
ವಿಧಾನಸೌಧ, ವಿಕಾಸ ಸೌಧ ಹಾಗೂ ಎಂಎಸ್ ಬಿಲ್ಡಿಂಗ್ನಲ್ಲಿ 3 ಸಾವಿರ ಸಿಬ್ಬಂದಿ ಕೆಲಸ ಮಾಡ್ತಾರೆ. ಪ್ರತಿದಿನ 1000ಕ್ಕೂ ಹೆಚ್ಚು ಮಂದಿ ಕಚೇರಿಗೆ ಭೇಟಿ ನೀಡ್ತಾನೇ ಇರ್ತಾರೆ. ನಮ್ಮ ಬಳಿ ಸ್ಯಾನಿಟೈಸರ್ ಹಾಗೂ ತಾಪಮಾನ ಪರೀಕ್ಷಿಸುವ ಯಂತ್ರ ಇದೆ. ಆದರೆ ಇದು ಕೊರೊನಾ ಸೋಂಕಿನಿಂದ ಸಿಬ್ಬಂದಿಯನ್ನ ಕಾಪಾಡಲು ಸಾಕಾಗೋದಿಲ್ಲ. ಈಗಾಗಲೇ ಕೆಲ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಸಚಿವಾಲಯದ ನೌಕರರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ರು.
ಖಾಸಗಿ ವಿಭಾಗದಂತೆ ಇಲ್ಲಿ ಜನರ ಓಡಾಟವನ್ನ ನಿಯಂತ್ರಿಸೋಕೆ ಆಗೋದಿಲ್ಲ. ಸರ್ಕಾರ ಆದಷ್ಟು ಬೇಗ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಆರಂಭಿಸಬೇಕು. ಕೈಗಾರಿಕಾ ಸಿಬ್ಬಂದಿಯನ್ನೂ ಆದ್ಯತೆಯ ಪಟ್ಟಿಗೆ ಸೇರಿಸಿಕೊಳ್ಳಬೇಕು. ಯಾಕಂದರೆ ಅವರಿಗೆ ವರ್ಕ್ ಫ್ರಂ ಹೋಂ ಅವಕಾಶ ಇರೋದಿಲ್ಲ ಎಂದು ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಹೇಳಿದ್ರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ರಾಜ್ಯ ಹೋಟೆಲ್ , ರೆಸ್ಟಾರೆಂಟ್ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ರಾಜ್ಯದ 20 ಲಕ್ಷ ಮಂದಿ ಹಾಗೂ ಬೆಂಗಳೂರಿನಲ್ಲಿ 10 ಲಕ್ಷ ಮಂದಿ ಹೋಟೆಲ್, ದರ್ಶಿನಿ, ಲಾಡ್ಜ್, ಬಾರ್ಗಳಲ್ಲಿ ಕೆಲಸ ಮಾಡ್ತಾರೆ. ಇವರನ್ನೂ ಸಹ ಆದ್ಯತೆಯ ಪಟ್ಟಿಗೆ ಸೇರಿಸಿಕೊಳ್ಳಬೇಕು. ಕೂಲಿ ಕಾರ್ಮಿಕರಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಲು ಆಗೋದಿಲ್ಲ. ಹೀಗಾಗಿ ಇವರಿಗೆ ಲಸಿಕೆ ನೀಡೋದ್ರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದ್ರು.