ಬೆಂಗಳೂರು: ಪತ್ನಿಯ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡಿದ್ದ ಪತಿರಾಯ ವರದಕ್ಷಿಣೆ ತರದಿದ್ದರೆ ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿ ಕಿರುಕುಳ ನೀಡಿದ್ದಾನೆ.
ಇದರಿಂದ ನೊಂದ ಪತ್ನಿ ನ್ಯಾಯಕ್ಕಾಗಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. 26 ವರ್ಷದ ಮಹಿಳೆ ಬಸವನಗುಡಿಯಲ್ಲಿ ವಾಸವಾಗಿದ್ದು ಪತಿ ಮಹದೇವ್ ವಿರುದ್ಧ ದೂರು ನೀಡಿದ್ದಾರೆ. ಚಾಲಕನಾಗಿರುವ ಮಹದೇವ್ 2017 ರಲ್ಲಿ ಮದುವೆಯಾಗಿದ್ದು ರಾಮನಗರದ ಹಾರೋಹಳ್ಳಿಯಲ್ಲಿ ಇರುವ ಜಮೀನು ಒತ್ತೆಯಿಟ್ಟು 10 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸರಿಯಾದ ಸಮಯಕ್ಕೆ ಸಾಲಪಾವತಿಸದ ಕಾರಣ ಜಮೀನು ವಶಕ್ಕೆ ಬ್ಯಾಂಕ್ ಮುಂದಾಗಿತ್ತು.
ಮಹದೇವ್ ಸಾಲ ತೀರಿಸಲು ಪತ್ನಿಗೆ ತವರು ಮನೆಯಿಂದ ವರದಕ್ಷಿಣೆ ಹಣ ತರಬೇಕೆಂದು ಕಿರುಕುಳ ನೀಡಿದ್ದಾನೆ. ನಿರಾಕರಿಸಿದಾಗ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದು, ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಪತ್ನಿಯ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡಿಕೊಂಡು ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.