ಬೆಂಗಳೂರು: ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲವಕುಶ ನಗರದಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮೊದಲಿಗೆ ಚಾಕುವಿನಿಂದ ಇರಿದ ಆರೋಪಿ ಮಹಿಳೆ ಕೆಳಗೆ ಬೀಳುತ್ತಿದ್ದಂತೆ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ ಎನ್ನಲಾಗಿದೆ. ಮಂಜುನಾಥ ಕೊಲೆ ಆರೋಪಿಯಾಗಿದ್ದು ರಾತ್ರಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈತನ ಪತ್ನಿ ಕೂಡ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳೆನ್ನಲಾಗಿದೆ. ಇದೇ ವಿಚಾರಕ್ಕೆ ದಂಪತಿ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ.
ರಾತ್ರಿ ಮನೆಗೆ ಬಂದ ಮಂಜುನಾಥ್ ಅಕ್ರಮ ಸಂಬಂಧ ವಿಚಾರವಾಗಿ ಪತ್ನಿಯೊಂದಿಗೆ ಜಗಳ ತೆಗೆದಿದ್ದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಮುಂದಾದ ವೇಳೆ ಚಾಕುವಿನಿಂದ ಇರಿದಿದ್ದಾನೆ. ರಸ್ತೆಗೆ ಬಂದ ಮಹಿಳೆಯನ್ನು ಅಟ್ಟಾಡಿಸಿ ಕಲ್ಲಿನಿಂದ ಜಜ್ಜಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯಿಂದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.