ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಸಿಗಲಿದೆ. ಆದರೆ ಕೊರೊನಾ ಲಸಿಕೆ ಸ್ವೀಕಾರಕ್ಕೂ ಮುನ್ನ ನೀವು ಕೆಲವು ಮಹತ್ವದ ವಿಚಾರಗಳನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು. ಕೊವ್ಯಾಕ್ಸಿನ್ ಲಸಿಕೆಯ 2 ಡೋಸ್ಗಳ ನಡುವೆ 4 ವಾರಗಳ ಅಂತರ ಹಾಗೂ ಕೋವಿಶೀಲ್ಡ್ ಲಸಿಕೆಯ 2 ಡೋಸ್ಗಳ ನಡುವೆ 6-8 ವಾರಗಳ ಅಂತರ ಇರಬೇಕು.
ಕೋವಿಡ್ ಸೋಂಕಿನಿಂದ ಗುಣಮುಖನಾದ ವ್ಯಕ್ತಿ ಲಸಿಕೆಯನ್ನ ಪಡೆಯಲು ಇಚ್ಛಿಸಿದರೆ, ಅಂತವರು ಸೋಂಕಿನ ಲಕ್ಷಣ ಮುಗಿದ ಒಂದರಿಂದ ಮೂರು ತಿಂಗಳಲ್ಲಿ ಲಸಿಕೆ ಸ್ವೀಕರಿಸಬಹುದು.
ಕೋವಿಡ್ 19 ಲಸಿಕೆಗಳು ರೋಗದ ಗಂಭೀರತೆಯನ್ನ ಕಡಿಮೆ ಮಾಡಬಲ್ಲವೇ ಹೊರತು ಸೋಂಕನ್ನೇ ಬಾರದಂತೆ ತಡೆಗಟ್ಟೋದಿಲ್ಲ ಎಂಬ ಅಂಶವನ್ನ ನೀವು ಎಂದಿಗೂ ನೆನಪಿನಲ್ಲಿಡಿ. ಕೋವಿಡ್ 19 ನಿಂದ ಉಂಟಾಗಬಲ್ಲ ಗಂಭೀರ ಲಕ್ಷಣಗಳ ತೀವ್ರತೆಯನ್ನ ಕಡಿಮೆ ಮಾಡುವ ಸಾಮರ್ಥ್ಯ ಈ ಲಸಿಕೆಗಳಿಗೆ ಇದೆ.
ಒಂದು ವೇಳೆ ನೀವು ಕೊರೊನಾ ಲಸಿಕೆಯ ಎರಡೂ ಡೋಸ್ಗಳನ್ನ ಸ್ವೀಕರಿಸಿದ ಬಳಿಕ ಸೋಂಕಿಗೆ ಒಳಗಾದಲ್ಲಿ ಇನ್ನೊಮ್ಮೆ ಲಸಿಕೆ ಪಡೆಯುವ ಅವಶ್ಯಕತೆ ಇಲ್ಲ. ನಿಮ್ಮ ಲಸಿಕೆಯು ದೇಹದಲ್ಲಿ ಪರಿಣಾಮಕಾರಿ ಉಳಿಯುತ್ತೆ ಮಾತ್ರವಲ್ಲದೇ ನಿಮಗೆ ಕೊರೊನಾದಿಂದ ಹೆಚ್ಚು ಅಪಾಯವಾಗದಂತೆ ಕಾರ್ಯ ನಿರ್ವಹಿಸುತ್ತೆ.
ಲಕ್ಷಣ ರಹಿತ ಸೋಂಕು ಹೊಂದಿದ್ದ ವ್ಯಕ್ತಿ ಲಸಿಕೆಯನ್ನ ಪಡೆದಿದ್ದಲ್ಲಿ ಹೆದರುವ ಅವಶ್ಯಕತೆ ಇಲ್ಲ. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗೋದಿಲ್ಲ.