ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಅಕ್ಟೋಬರ್ ನಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ.
ಕೊರೋನಾ ಪರಿಸ್ಥಿತಿ ಆಧರಿಸಿ ಗ್ರಾಮ ಪಂಚಾಯಿತಿಗಳಿಗೆ ಅಕ್ಟೋಬರ್ ನಲ್ಲಿ ಚುನಾವಣೆ ನಡೆಸುವುದಾಗಿ ನ್ಯಾಯಾಲಯಕ್ಕೆ ಚುನಾವಣಾ ಆಯೋಗ ತಿಳಿಸಿದೆ. ಇದಕ್ಕೆ ಪೂರಕವಾಗಿ ತಯಾರಿ ನಡೆಸಿರುವ ಆಯೋಗ ಮತದಾರರ ಪಟ್ಟಿ ಸಿದ್ಧಪಡಿಸಲು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜುಲೈ 13 ರಿಂದ 18 ರ ವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮತದಾರರನ್ನು ಗುರುತಿಸಿ ಜುಲೈ 20ರಿಂದ 29ರವರೆಗೆ ಮನೆ ಮನೆಗೆ ಭೇಟಿ ನೀಡಿ ಪಟ್ಟಿಯಲ್ಲಿರುವ ಮತದಾರರನ್ನು ಗುರುತಿಸಬೇಕು.
ಆಗಸ್ಟ್ 15 ರ ಒಳಗೆ ಪ್ರಥಮ ಚೆಕ್ ಲಿಸ್ಟ್ ಪಡೆದುಕೊಂಡು ಪರಿಶೀಲನೆ ನಡೆಸಬೇಕು. ಆಗಸ್ಟ್ 6ರಂದು ಕರಡು ಮತದಾರರ ಪಟ್ಟಿಯನ್ನು ಮುದ್ರಕರಿಂದ ಪಡೆದುಕೊಂಡು ಆಗಸ್ಟ್ 7ರಂದು ಪ್ರಕಟಿಸಬೇಕು.
ಆಗಸ್ಟ್ 14 ರವರೆಗೆ ಆಕ್ಷೇಪಣೆ ಸಲ್ಲಿಕೆ ಆಗಬೇಕು. ಆಗಸ್ಟ್ 24ರೊಳಗೆ ಆಕ್ಷೇಪಣೆಯನ್ನು ಇತ್ಯರ್ಥಪಡಿಸಿಕೊಂಡು ಆಗಸ್ಟ್ 30 ರಂದು ಅಂತಿಮ ಚೆಕ್ ಲಿಸ್ಟ್ ಪರಿಶೀಲಿಸಬೇಕು. ಆಗಸ್ಟ್ 31 ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.