ವಿಜಯಪುರ: ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವೈದ್ಯ ನಾಲ್ಕನೇ ಮದುವೆಯಾಗಲು ರೆಡಿಯಾಗಿದ್ದು ಮೂರನೇ ಪತ್ನಿ ಮದುವೆ ನಿಲ್ಲಿಸುವಂತೆ ವಿಜಯಪುರ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆನೇಕಲ್ ತಾಲೂಕಿನ ಆರೋಗ್ಯ ಕೇಂದ್ರವೊಂದರಲ್ಲಿ ಕೆಲಸಮಾಡುತ್ತಿರುವ ಡಾ. ಮಂಜುನಾಥ್ ವಿರುದ್ಧ ಇಂತಹ ಆರೋಪ ಕೇಳಿಬಂದಿದೆ. ಮೊದಲ ಪತ್ನಿಗೆ ಒಂದು ಗಂಡು ಮಗುವಿದೆ. ನಂತರ ಎರಡನೇ ಮದುವೆಯಾಗಿದ್ದ ಮಂಜುನಾಥ ಎರಡನೇ ಪತ್ನಿಗೆ ಹಣಕೊಟ್ಟು ರಾಜಿ ಮಾಡಿಕೊಂಡಿದ್ದಾನೆ. ಬಳಿಕ ಸುಳ್ಳು ಹೇಳಿ ಮೂರನೇ ಮದುವೆಯಾಗಿದ್ದಾನೆ. ಆಕೆಗೂ ವಂಚಿಸಿ ನಾಲ್ಕನೇ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.
ಧಾರವಾಡ ಮೂಲದ ಯುವತಿಯೊಂದಿಗೆ 4 ನೇ ಮದುವೆಯಾಗಲು ಸಿದ್ಧತೆ ನಡೆಸಿದ್ದು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮೂರನೇ ಪತ್ನಿ ಪತಿ ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆನ್ನಲಾಗಿದೆ.