
ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ಕಾಂಗ್ರೆಸ್ ಮುಖಂಡ ಮಹಾದೇವ ಭೈರಗೊಂಡನ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಮಹದೇವ ಭೈರಗೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದ ಕೆರೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಾಬುರಾಮ್ ಮಾರುತಿ ಮೃತಪಟ್ಟಿದ್ದಾರೆ.
ಬೆಂಬಲಿಗರೊಂದಿಗೆ ಸೊಲ್ಲಾಪುರ ರಸ್ತೆಯಲ್ಲಿ ಚಡಚಣ ಕಡೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಟಿಪ್ಪರ್ ನಿಂದ ಅವರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಕಾರ್ ಸುತ್ತುವರೆದ ದುಷ್ಕರ್ಮಿಗಳು ಕಲ್ಲು ತೂರಿ ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಎಸ್ಪಿ ಅನುಪಮ್ ಅಗರವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಗುಂಡು ತಗಲಿ ಬಾಬುರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆನ್ನು ಹೊಟ್ಟೆ ಭಾಗಕ್ಕೆ ಗುಂಡು ತಗುಲಿರುವ ಮಹಾದೇವ ಭೈರಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆ ವೈಷಮ್ಯವೇ ಕಾರಣವಿರಬಹುದೆಂದು ಹೇಳಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.