ಬೆಂಗಳೂರು: ನಗರ ಪ್ರದೇಶಗಳಲ್ಲಿ ಉದ್ಯೋಗ ಕಳೆದುಕೊಂಡ ಹೆಚ್ಚಿನ ಜನ ಗ್ರಾಮಗಳಲ್ಲಿ ನೆಲೆಸಿದ್ದು, ಬಹುತೇಕರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಬಿತ್ತನೆ ಪ್ರದೇಶ ಜಾಸ್ತಿಯಾಗಿದ್ದು, ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಳೆಗಳಿಗೆ ಅಗತ್ಯವಾದ ರಸಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಟ ನಡೆಸಿದ್ದಾರೆ. ರಸಗೊಬ್ಬರ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಅನೇಕ ಕ್ರಮಕೈಗೊಂಡಿದೆ.
ಚೀನಾದಿಂದ ಬರಬೇಕಿದ್ದ ಯೂರಿಯಾ ತುಂಬಿದ ಹಡಗು ಮಳೆಯಿಂದಾಗಿ ವಿಳಂಬವಾಗಿ ಮಂಗಳೂರು ತಲುಪಿದೆ. ಇಂದಿನಿಂದ ರಸಗೊಬ್ಬರ ಲಾರಿಗಳಿಗೆ ಲೋಡ್ ಆಗಲಿದ್ದು ಹಬ್ಬದ ನಂತರ ಎಲ್ಲ ಜಿಲ್ಲೆಗಳಿಗೂ ಯೂರಿಯಾ ಗೊಬ್ಬರ ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ.