ಉಡುಪಿ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೊ ಬಿಡೆನ್ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರೀಸ್ ಆಯ್ಕೆಯಾಗುತ್ತಿದ್ದಂತೆ ಭಾರತೀಯರಿಗೆ ಹೆಚ್ಚಿನ ಅವಕಾಶಗಳು ತೆರೆದುಕೊಳ್ಳುತ್ತಿವೆ. ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ದೇಶದ ವಿವಿಧ ಮಹತ್ವದ ಹುದ್ದೆಗಳಲ್ಲಿ ಭಾರತೀಯ ಮೂಲದವರು ಅಲಂಕೃತವಾಗುತ್ತಿದ್ದಾರೆ.
ಜೊ ಬಿಡೆನ್ ಅವರ ಪತ್ನಿ ಅಮೆರಿಕಾದ ಮೊದಲ ಮಹಿಳೆ ಜಿಲ್ ಬಿಡೆನ್ ಅವರ ಯೋಜನಾ ನಿರ್ದೇಶಕರಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿ ಕಕ್ಕುಂಜೆಯ ಮಾಲಾ ಅಡಿಗ ಆಯ್ಕೆಯಾಗಿದ್ದಾರೆ. ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
2020 ರ ಜೊ ಬಿಡೆನ್ ಅವರ ಚುನಾವಣೆಯಲ್ಲಿ ಜೋ ಹಾಗೂ ಜಿಲ್ ಇಬ್ಬರಿಗೂ ಹಿರಿಯ ಯೋಜನಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಬಿಡೆನ್ ಫೌಂಡೇಶನ್ನ ಉನ್ನತ ಶಿಕ್ಷಣ ಹಾಗೂ ಸ್ಥಾನಿಕ ಕುಟುಂಬಗಳ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
ಒಬಾಮಾ ಅಧ್ಯಕ್ಷೀಯ ಅವಧಿಯಲ್ಲಿ ಅಡಿಗ ಅವರು ಬ್ಯೂರೋ ಆಫ್ ಎಜುಕೇಶನಲ್ ಆಂಡ್ ಕಲ್ಚರಲ್ ಅಫೇರ್ಸ್ ನ ವಾರ್ಷಿಕ ಕಾರ್ಯಕ್ರಮಗಳ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿ ಕಾರ್ಯನಿರ್ವಹಿಸಿದ್ದರು. ಮತ್ತು ರಾಜ್ಯ ಇಲಾಖೆಗಳ ಕಚೇರಿಯಲ್ಲಿ ರಾಷ್ಟ್ರೀಯ ಮಹಿಳೆಯರ ವಿಭಾಗದ ಮುಖ್ಯಸ್ಥೆಯಾಗಿ ರಾಯಭಾರಿಯ ಮುಖ್ಯ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.
ಅಷ್ಟೇ ಅಲ್ಲ ಅವರು ನ್ಯಾಷನಲ್ ಸೆಕ್ಯುರಿಟಿ ಸ್ಟಾಪ್ಸ್ (ಎನ್ಎಸ್ಎಸ್)ನಲ್ಲಿ ಮಾನವ ಹಕ್ಕು ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಟಾರ್ನಿ ಜನರಲ್ ಅವರ ಜತೆಗೂ ಕೆಲಸ ಮಾಡಿದ್ದರು. ಸರ್ಕಾರಿ ಸೇವೆಗೆ ಸೇರುವುದಕ್ಕೂ ಮುಂಚೆ ಮಾಲಾ ಅಡಿಗ ಅವರು ಒಬಾಮಾ ಅವರ ಅಧ್ಯಕ್ಷೀಯ ಚುನಾವಣೆಯ ಕ್ಯಾಂಪೇನಿಂಗ್ನಲ್ಲೂ ಸುಮಾರು ಎರಡು ವರ್ಷ ಭಾಗವಹಿಸಿದ್ದರು. ಅವರು ಚಿಕಾಗೊ ವಿಶ್ವ ವಿದ್ಯಾಲಯದ ಲಾ ಸ್ಕೂಲ್ನಲ್ಲಿ ಜೆಡಿ ಪದವಿ, ಮಿನ್ನೆಸೊಟಾ ವಿವಿಯಿಂದ ಎಂಪಿಎಚ್ ಪಡೆದಿದ್ದಾರೆ.
ಮಾಲಾ ಅಡಿಗ ಅವರು ಅವಿಭಜಿತ ದಕ್ಷಿಣ ಕನ್ನಡ ಮೂಲದ ಕರ್ನಾಟಕ ಬ್ಯಾಂಕ್ ಲಿಮಿಟೆಡ್ನ ಸ್ಥಾಪಕ ಕೆ. ಸೂರ್ಯನಾರಾಯಣ ಅಡಿಗ ಅವರ ಕುಟುಂಬಕ್ಕೆ ಸೇರಿದವರು.