ಗದಗ: ಕೊರೋನಾ ಲಾಕ್ಡೌನ್ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಚಂದನ ವಾಹಿನಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಆದರೆ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಹಿಳೆಯೊಬ್ಬರು ಚಿನ್ನದ ತಾಳಿಯನ್ನು ಅಡವಿಟ್ಟು ಟಿವಿ ಖರೀದಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ರೆಡ್ಡೇರ ನಾಗನೂರ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕಸ್ತೂರಿ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ಹೊತ್ತಿದ್ದಾರೆ.
ಅವರ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದು, ಮಕ್ಕಳಿಗೆ ಅನುಕೂಲವಾಗುವಂತೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ಕೇಳಲು ಟಿವಿ ಖರೀದಿಸಿದ್ದಾರೆ. ಇವರ ಮನೆಯಲ್ಲಿ ಟಿವಿ ಇಲ್ಲದ ಕಾರಣ ಮಕ್ಕಳ ಕಲಿಕೆಗೆ ತೊಂದರೆಯಾಗಿತ್ತು. ಶಿಕ್ಷಕರು ಕರೆಮಾಡಿ ಟಿವಿ ನೋಡುವಂತೆ ತಿಳಿಸುತ್ತಿದ್ದರು. ಪಾಠಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಟಿವಿ ಇಲ್ಲದ ಕಾರಣ ಮಕ್ಕಳಿಗೆ ಕಲಿಯಲು ಸಾಧ್ಯವಾಗಿರಲಿಲ್ಲ. ಇದರಿಂದ ಕಸ್ತೂರಿ ತಾಳಿ ಮಾರಿ ಮಕ್ಕಳ ಅನುಕೂಲಕ್ಕಾಗಿ ಟಿವಿ ತಂದಿದ್ದಾರೆ.