ಬೆಂಗಳೂರು: ತುಂಗಭದ್ರಾ ಅಣೆಕಟ್ಟೆಯ ಡ್ಯಾಮ್ ಮ್ಯಾನೇಜ್ ಮೆಂಟ್ ಕಮಿಟಿ ನೀಡಿರುವ ಸಲಹೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡಿದೆ. ಇದರಿಂದ ಡ್ಯಾಮ್ ನ ಕ್ರಸ್ಟ್ ಗೇಟ್ ಮುರಿದು ಸಮಸ್ಯೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ತುಂಗಭದ್ರಾ ಡ್ಯಾಂ ಸ್ವತಂತ್ರ ಪೂರ್ವದಲ್ಲಿ ನಿರ್ಮಾಣವಾಗಿದೆ. ಅದು ಕಾಲ ಕಾಲಕ್ಕೆ ಹಲವಾರು ಸಮಸ್ಯೆ ಎದುರಿಸುತ್ತಾ ಬಂದಿದೆ. ಹೂಳು ತುಂಬಿರುವ ಬಗ್ಗೆ ಬಹಳ ದೊಡ್ಡ ಸಮಸ್ಯೆ ಆಗಿತ್ತು. ಹೀಗಾಗಿ ಸಮಾನಾಂತರವಾದ ಅಣೆಕಟ್ಟು ಕಟ್ಟಬೇಕು ಅಂತ ನಮ್ಮ ಅವಧಿಯಲ್ಲಿ ಡಿಪಿಆರ್ ಮಾಡಿ ಸಿದ್ಧತೆ ಮಾಡಲಾಗಿತ್ತು. ಡ್ಯಾಂ ಮ್ಯಾನೇಜ್ ಮೆಂಟ್ ಕಮಿಟಿ ಕೇಂದ್ರ ಸರ್ಕಾರದಿಂದ ಬಂದು ಹಲವು ಸಲಹೆ ಕೊಟ್ಟಿದ್ದಾರೆ. ಅವರ ಸಲಹೆಗಳನ್ನು ರಾಜ್ಯ ಸರ್ಕಾರ ಒತ್ತು ಕೊಟ್ಟು ಜಾರಿ ಮಾಡಬೇಕು. ಆದರೆ, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಅನಿಸುತ್ತದೆ. ಹಾಗಾಗಿ ಈಗ ಗೇಟ್ ಕಟ್ ಆಗಿದೆ ಎಂದರು.
ರಾಜ್ಯ ಸರ್ಕಾರ ಈ ಕೂಡಲೇ ಸಂಪೂರ್ಣ ಗೇಟ್ ಭದ್ರಗೊಳಿಸಬೇಕು. ಹಣ ಬಿಡುಗಡೆ ಮಾಡಿ ಗೇಟ್ ದುರಸ್ತಿ ಕೆಲಸ ಮಾಡಬೇಕು. ಡ್ಯಾಂ ಹಾಗೂ ಜನರ ಸುರಕ್ಷತೆಯನ್ನು ಸರ್ಕಾರ ಗಮನಿಸಬೇಕು. ಈ ವರ್ಷ ಅತೀ ಹೆಚ್ಚು ಮಳೆ ಬರುತ್ತದೆ ಎಂದು ಮೊದಲೇ ಹವಾಮಾನ ತಜ್ಞರು ಹೇಳಿದ್ದರು. ಅದನ್ನು ಅರ್ಥ ಮಾಡಿಕೊಂಡು ಡ್ಯಾಂನ ಇಂಜಿನಿಯರ್ ಗಳು, ತಾಂತ್ರಿಕ ತಜ್ಞರು ಎಲ್ಲರೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿದರು.