ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿದ್ದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪುವ ಆತಂಕಕ್ಕೆ ಒಳಗಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ನಾಗವಳ್ಳಿ ಗ್ರಾಮದಿಂದ ಕಾರ್ಗಲ್ ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 6.30 ಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ 16 ಮಕ್ಕಳನ್ನು ಕರೆದುಕೊಂಡು ಹೋಗಲಾಗಿದೆ. ಮಾರ್ಗಮಧ್ಯದಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದಿದ್ದು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದಲ್ಲಿ ತಲುಪದ ಆತಂಕ ಎದುರಾಗಿದೆ.
ನಾಗವಳ್ಳಿ ಗ್ರಾಮದಿಂದ ಕಾರ್ಗಲ್ ಪರೀಕ್ಷಾ ಕೇಂದ್ರ ಸುಮಾರು 50 ಕಿಲೋಮೀಟರ್ ದೂರವಿದ್ದು, ದಟ್ಟವಾದ ಕಾಡು ಮತ್ತು ಪಶ್ಚಿಮಘಟ್ಟ ಪ್ರದೇಶದಿಂದ ಕೂಡಿದೆ. ರಸ್ತೆಗೆ ಮರ ಬಿದ್ದಿರುವುದನ್ನು ಗಮನಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮರದ ರೆಂಬೆಗಳನ್ನು ಕತ್ತರಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೆಎಸ್ಆರ್ಟಿಸಿ ಬಸ್ ಚಾಲಕರು ಮತ್ತು ಮಾರ್ಗಾಧಿಕಾರಿಗಳು, ಗ್ರಾಮಸ್ಥರು ರಸ್ತೆಯಲ್ಲಿ ಬಸ್ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ. ಬಸ್ ನಲ್ಲಿದ್ದ ಎಲ್ಲ ಮಕ್ಕಳನ್ನು ಬೆಳಗ್ಗೆ 8.20 ಕ್ಕೆ ಸರಿಯಾಗಿ ಕಾರ್ಗಲ್ ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ. ವಾಹನ ಚಾಲಕರ ಸಮಯಪ್ರಜ್ಞೆಗೆ. ಅಧಿಕಾರಿಗಳು, ಗ್ರಾಮಸ್ಥರ ಸಹಕಾರಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಅಭಿನಂದಿಸಿದ್ದಾರೆ.