ಬೆಳಗಾವಿ: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವೆಡೆ ತಟ್ಟೆ-ಲೋಟ ಬಡಿದು ಪ್ರತಿಭಟನೆ ನಡೆಸಿದ್ದರೆ, ಇನ್ನು ಹಲವೆಡೆಗಳಲ್ಲಿ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ.
ಈ ನಡುವೆ ಬೆಳಗಾವಿ ಬಸ್ ನಿಲ್ದಾಣದಲ್ಲಿ ಹೈಡ್ರಾಮಾ ನಡೆದಿದೆ. ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಭಿಕ್ಷೆ ಬೇಡಿ ವಿಭನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನೊಬ್ಬ ಮುಷ್ಕರದಲ್ಲಿ ಭಾಗಿಯಾಗದೇ ಬಸ್ ಓಡಿಸಿದ್ದಾನೆ. ಇದನ್ನು ಗಮನಿಸಿದ ಪ್ರತಿಭಟನಾ ನಿರತ ಮಹಿಳೆಯರು ಬಸ್ ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಸ್ ಹತ್ತಿದ ಮಹಿಳೆಯರು ಚಾಲಕನಿಗೆ ಹೂವಿನ ಹಾರ ಹಾಕಿ ಆಕ್ರೋಶ ವ್ಯಕ್ತಪಡಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ರೊಚ್ಚಿಗೆದ್ದು ಮಾಂಗಲ್ಯ ಸರವನ್ನೇ ಹಾಕಲು ಮುಂದಾಗಿದ್ದಾರೆ. ನಾವು ಮಕ್ಕಳೊಂದಿಗೆ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದರೆ ನೀನು ಬಸ್ ಓಡಿಸಿ ಸರ್ಕಾರದ ಕ್ರಮವನ್ನು ಬೆಂಬಲಿಸಲು ಮುಂದಾಗಿದ್ದೀಯಾ. ಬಸ್ ಓಡಿಸುವುದಾದರೆ ತಾಳಿ ಹಾಕಿಕೊಂಡು ಓಡಿಸು ಎಂದು ಮಹಿಳೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಒಟ್ಟಾರೆ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.