ಬೆಳಗಾವಿ: ದೀಪಾವಳಿ ಹಬ್ಬದ ಸಂದರ್ಭದಲ್ಲೂ ಕೆಎಸ್ಆರ್ ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಸಾರಿಗೆ ಇಲಾಖೆ ಸಂಬಳ ಪಾವತಿಸಿಲ್ಲ. ಕಳೆದ ಮೂರು ತಿಂಗಳಿಂದಲೂ ವೇತನವಿಲ್ಲದೇ ಸಾರಿಗೆ ನೌಕರರು ಪರದಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲ, ಟಿಕೆಟ್ ದುಡ್ದು ಬರಿ ಡಿಸೇಲ್ ಖರ್ಚಿಗೆ ಆಗುತ್ತೆ ಎಂದಿದ್ದಾರೆ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ.
ಸಾರಿಗೆ ಸಿಬ್ಬಂದಿಗೆ ಸಂಬಳ ಪಾವತಿಸದ ವಿಚಾರವಾಗಿ ಮಾತನಾಡಿದ ಸಚಿವ ಸವದಿ, ಕಳೆದ 8 ತಿಂಗಳಿಂದ ಕೊರೊನಾ ಕಾರಣದಿಂದಾಗಿ ಸಾರಿಗೆ ಇಲಾಖೆ ಸಂಕಷ್ಟದಲ್ಲಿದೆ. ಆದರೂ ಎರಡು ತಿಂಗಳು ಸಾರಿಗೆ ಸಿಬ್ಬಂದಿಗೆ ಸರ್ಕಾರದಿಂದಲೇ ಸಂಬಳ ಪಾವತಿಸಿದ್ದೇವೆ. ಸಂಬಳ ನೀಡಲು ಸರ್ಕಾರದ ಬಳಿಯೂ ಹಣದ ಅಭಾವವಿದೆ. ಕೊರೊನಾದಿಂದಾಗಿ ತೊಂದರೆಯಾಗುತ್ತಿದ್ದು, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿ ತಿಂಗಳು 328 ಕೋಟಿ ಸಂಬಳಕ್ಕೆ ಹಣ ಬೇಕು. ಟಿಕೆಟ್ ನಿಂದ ಬರುತ್ತಿರುವ ಹಣ ಡೀಸೆಲ್ ಖರ್ಚಿಗೆ ಸರಿಯಾಗುತ್ತೆ ಎಂದರು.
ಸಂಬಳ ನೀಡದ ಕಾರಣ ಸಿಬ್ಬಂದಿಗಳು ಅಸಮಾಧಾನಗೊಂಡಿರುವುದು ಸಹಜ. ಇನ್ನು 3-4 ದಿನಗಳಲ್ಲಿ ಸ್ವಲ್ಪ ಪ್ರಮಾಣದ ವೇತನ ಪಾವತಿ ಮಾಡುತ್ತೇವೆ. ಸಧ್ಯಕ್ಕೆ ಸರ್ಕಾರದ ಮೇಲೆಯೇ ಅವಲಂಬಿತರಾಗಿದ್ದೇವೆ. ಈಗಾಗಲೇ ಎರಡು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.