ರಾಜ್ಯದಲ್ಲಿ ಸದ್ಯ ಕೊರೊನಾ ಲಾಕ್ಡೌನ್ ವಿಸ್ತರಣೆ ಬಹುದೊಡ್ಡ ಚರ್ಚಾ ವಿಷಯವಾಗಿ ಬದಲಾಗಿದೆ. ಮೇ 10ರಿಂದ 24ರವರೆಗೆ ಲಾಕ್ಡೌನ್ ಆದೇಶವನ್ನ ಸರ್ಕಾರ ಜಾರಿ ಮಾಡಿದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಈ ಫಲಿತಾಂಶವನ್ನ ಆಧರಿಸಿ ವಿಪಕ್ಷಗಳು ಲಾಕ್ಡೌನ್ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಮೇಲಿಂದ ಮೇಲೆ ಬೇಡಿಕೆಗಳನ್ನ ಇಡುತ್ತಿದೆ.
ಈ ನಡುವೆ ರಾಜ್ಯದ ವಿವಿಧ ಸಚಿವರೂ ಸಹ ಲಾಕ್ಡೌನ್ ವಿಸ್ತರಣೆಯತ್ತ ಒಲವು ತೋರಿದ್ದಾರೆ. ಹೀಗಾಗಿ ಲಾಕ್ಡೌನ್ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಅನೇಕರಲ್ಲಿದೆ. ಈ ಎಲ್ಲದರ ನಡುವೆ ಸಿಎಂ ಬಿ.ಎಸ್. ಯಡಿಯೂರಪ್ಪ ನಾಳೆ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಕರೆದಿದ್ದಾರೆ. ನಾಳೆಯ ಸುದ್ದಿಗೋಷ್ಠಿಯಲ್ಲೇ ಲಾಕ್ಡೌನ್ ಭವಿಷ್ಯ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಈ ವಾರ ಸಚಿವ ಸಂಪುಟ ಸಭೆ ನಿಗದಿಯಾಗಿಲ್ಲ. ಹೀಗಾಗಿ ಲಾಕ್ಡೌನ್ ವಿಸ್ತರಣೆ ಕುರಿತಂತೆ ಹಿರಿಯ ಸಚಿವರ ಜೊತೆ ಚರ್ಚಿಸಿ ಸಿಎಂ ನಾಳೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಲಾಕ್ಡೌನ್ ವಿಸ್ತರಣೆ ಮಾಡಿದರೂ ಸಹ ಕೈಗಾರಿಕೆ ಸೇರಿದಂತೆ ಕೆಲ ಆಯ್ದ ವಲಯಗಳಿಗೆ ವಿನಾಯಿತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಮಾತ್ರವಲ್ಲದೇ ಲಾಕ್ಡೌನ್ ಸಂದರ್ಭದಲ್ಲಿ ಜನರ ಜೀವನ ನಿರ್ವಹಣೆಯೂ ಸರ್ಕಾರದ ಜವಾಬ್ದಾರಿಯಾಗಿಯೋದ್ರಿಂದ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಊಟ ಹಾಗೂ ಪಡಿತರ ಚೀಟಿ ಹೊಂದಿರುವವರಿಗೆ ಧವಸ ಧಾನ್ಯಗಳನ್ನ ನೀಡುವ ಬಗ್ಗೆಯೂ ನಾಳೆ ಸಿಎಂ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.