ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಬಳಲುತ್ತಿದ್ದ ಕರ್ನಾಟಕದ ಮಂದಿಗೆ ಸಂಜೀವಿನಿಯಂತೆ ಇಂದು ಬೆಳಗ್ಗೆ ರೈಲುಗಳ ಮೂಲಕ 6 ಆಕ್ಸಿಜನ್ ಟ್ಯಾಂಕರ್ಗಳು ಬಂದಿವೆ. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಜಮ್ಶೆಡ್ಪುರದಿಂದ ಹೊರಟಿದ್ದು ರೈಲು ಇಂದು ಮುಂಜಾನೆ ಬೆಂಗಳೂರಿಗೆ ಬಂದು ತಲುಪಿದೆ.
ಈ ಮೂಲಕ ಕರ್ನಾಟಕಕ್ಕೆ ಇದೇ ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದಂತಾಗಿದೆ. ಇನ್ನು ಈ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್, ಕೇಂದ್ರ ಸರ್ಕಾರ ರಾಜ್ಯಕ್ಕೆ 120 – 125 ಮೆ.ಟನ್ ಆಕ್ಸಿಜನ್ ಪೂರೈಕೆ ಮಾಡೋದಾಗಿ ಹೇಳಿತ್ತು. ಅದರಂತೆಯೇ ಇಂದು 6 ಕಂಟೈನರ್ಗಳಲ್ಲಿ 120 ಮೆ.ಟನ್ ಆಕ್ಸಿಜನ್ನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದೆ. ಕೇಂದ್ರ ಸರ್ಕಾರವು ರಾಜ್ಯದ ಎಲ್ಲಾ ಮನವಿಗೆ ಸ್ಪಂದಿಸುತ್ತಿದೆ ಎಂದು ಹೇಳಿದ್ರು.
ಇದೇ ವೇಳೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ಗಳ ಬಗ್ಗೆಯೂ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನ ನಮ್ಮಲ್ಲೇ ಸಂಪೂರ್ಣವಾಗಿ ಬಳಕೆ ಮಾಡಲು ಅನುಮತಿ ಕೇಳಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬಳಿ ಮಾತನಾಡಿದ್ದೇನೆ. ಈ ರೀತಿ ರೈಲುಗಳಲ್ಲಿ ಆಮ್ಲಜನಕಗಳು ಬಂದು ತಲುಪಲು ಸಮಯಾವಕಾಶ ಹಿಡಿಯುತ್ತೆ. ಆದರೆ ನಮ್ಮಲ್ಲಿ ತಯಾರಾಗುವ ಆಮ್ಲಜನಕಗಳನ್ನ ನಾವೇ ಬಳಕೆ ಮಾಡಿಕೊಂಡರೆ ಲಾಜಿಸ್ಟಿಕ್ ಬಳಕೆ ಅವಶ್ಯಕತೆ ಇರೋದಿಲ್ಲ ಎಂದು ಹೇಳಿದ್ದೇನೆ. ಈ ಬಗ್ಗೆ ಕೇಂದ್ರದ ನಾಯಕರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಿದ್ರು.