ಕೊರೊನಾ 2ನೆ ಅಲೆ ನಡುವೆಯೇ ರಾಜ್ಯದಲ್ಲಿ ಕೊರೊನಾ ಲಸಿಕೆಗೆ ಅಭಾವ ಉಂಟಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಈ ಪರಿಸ್ಥಿತಿಯ ಬಗ್ಗೆ ಹೈಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಎಲ್ಲದರ ನಡುವೆ ಕಂದಾಯ ಸಚಿವ ಆರ್. ಅಶೋಕ್ ರಾಜ್ಯದಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ನೀಡುವಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ 2ನೇ ಡೋಸ್ ಲಸಿಕೆ ಹಂಚಿಕೆ ಕಾರ್ಯದಲ್ಲಿ ಯಾವುದೇ ಗೊಂದಲವಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ಲಸಿಕೆಯನ್ನ ಕಳುಹಿಸಿಕೊಟ್ಟಿದೆ. ರಾಜ್ಯದ ಬಳಿ ಈಗಾಗಲೇ 6.5 ಲಕ್ಷ ಡೋಸ್ ಲಸಿಕೆಯ ಸಂಗ್ರಹವಿದೆ. ಆದರೆ ಕೊವ್ಯಾಕ್ಸಿನ್ ಡೋಸ್ ಸಂಗ್ರಹದಲ್ಲಿ ಮಾತ್ರ ಕೊಂಚ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾರೆ.
ಆದರೆ ರಾಜ್ಯದಲ್ಲಿ ಕೊರೊನಾ ಲಸಿಕೆ ಹಂಚಿಕೆ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, 18 ರಿಂದ 44 ವರ್ಷದವರು ಹಾಗಿರಲಿ 45 ವರ್ಷ ಮೇಲ್ಪಟ್ಟವರಿಗೆ ನಿಗದಿತ ಸಮಯದಲ್ಲಿ 2ನೇ ಡೋಸ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿತ್ತು.