ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳಿಗೆ ಮಕ್ಕಳನ್ನು ಕಳಿಸದಿರಲು ಪೋಷಕರು ತೀರ್ಮಾನಿಸಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ ಆರಂಭವಾಗುವುದಿಲ್ಲ.
ಇದರಿಂದಾಗಿ ಮನೆಯಲ್ಲೇ ಉಳಿದ ಮಕ್ಕಳಿಗಾಗಿ ಅನೇಕ ಕಡೆ ಪಠ್ಯಪುಸ್ತಕ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹಲವೆಡೆ ಶಾಲೆಗಳಿಂದ ಮಕ್ಕಳಿಗೆ ಮಠ್ಯ ಪುಸ್ತಕ ವಿತರಿಸಲಾಗಿದೆ.
ಇನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಶೇಕಡ 30 ರಷ್ಟು ಪಠ್ಯ ಕಡಿತ ಮಾಡಲಾಗಿದ್ದು ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಲಾಗಿದೆ. ಪ್ರತಿ ಶೈಕ್ಷಣಿಕ ವರ್ಷ 220 ದಿನ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಈ ವರ್ಷ ಕಡಿತಗೊಳಿಸಿ 120 ದಿನಗಳಿಗೆ ಅನುಗುಣವಾಗಿ ಬೋಧನಾ ಅವಧಿಯನ್ನು ನಿಗದಿ ಮಾಡುವ ಸಾಧ್ಯತೆ ಇದೆ. ಇದಕ್ಕೆ ಅನುಗುಣವಾಗಿ ಶೇಕಡ 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ.
ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಪಠ್ಯದಲ್ಲಿ ಶೇಕಡ 30ರಷ್ಟು ಕಡಿತಗೊಳಿಸಲಾಗಿದೆ. ಪಠ್ಯ ವಸ್ತು ಪರಿಷ್ಕರಣ ತಂಡ, ಶಿಕ್ಷಣ ತಜ್ಞರು, ಚಿಂತಕರು ಬೋಧನಾ ಶಿಕ್ಷಕರನ್ನು ಒಳಗೊಂಡ ತಂಡ ಅಂದಾಜು ಪಠ್ಯ ನಿಗದಿ ಮಾಡಿದ್ದು ಮಾಹಿತಿಯನ್ನು ktbs.kar.nic.in ನಲ್ಲಿ ಗಮನಿಸಬಹುದಾಗಿದೆ ಎಂದು ಹೇಳಲಾಗಿದೆ.