ಬೆಂಗಳೂರು: ಕೊರೋನಾ ಕಾರಣದಿಂದ ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳು ಆರಂಭವಾಗಿಲ್ಲ. ಹೀಗಾಗಿ ಪದವಿಪೂರ್ವ ತರಗತಿಗಳ ಪಠ್ಯದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಲಾಗಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ. 2020 -21 ನೇ ಸಾಲಿಗೆ ಅನ್ವಯವಾಗುವಂತೆ ಪಠ್ಯದಲ್ಲಿ ಶೇಕಡ 30 ರಷ್ಟು ಕಡಿತ ಮಾಡಲಾಗಿದೆ. ವಿಜ್ಞಾನ ವಿಭಾಗದ ಎಲ್ಲಾ ವಿಷಯಗಳಿಗೆ ಸಿಬಿಎಸ್ಇ ಪಠ್ಯಕ್ರಮ ಅಳವಡಿಸಲಾಗಿದೆ. ಹಾಗಾಗಿ ಸಿಬಿಎಸ್ಇ ಶಿಕ್ಷಣ ಮಂಡಳಿ ನಿಗದಿಪಡಿಸಿದ ಪಠ್ಯವನ್ನು ಅಳವಡಿಸಿಕೊಳ್ಳಲಾಗಿದೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಇನ್ನು ಆರಂಭವಾಗದ ಹಿನ್ನೆಲೆಯಲ್ಲಿ ಯೂಟ್ಯೂಬ್ ಮೂಲಕ ಪಠ್ಯ ಬೋಧಿಸಲಾಗುತ್ತಿದೆ. ಕಲಾ ಮತ್ತು ವಾಣಿಜ್ಯ ವಿಭಾಗದ ಪಠ್ಯಗಳನ್ನು ಪರಿಷ್ಕರಿಸಲಾಗಿದ್ದು 34 ವಿಷಯಗಳಲ್ಲಿ ಕರ್ನಾಟಕ ಸಂಗೀತ ಹೊರತಾಗಿ ಉಳಿದ ವಿಷಯಗಳ ಮಾಹಿತಿಯನ್ನು ಸಿದ್ಧಪಡಿಸಲಾಗಿದೆ. ಕೇಂದ್ರ ಸರ್ಕಾರ ಕೂಡ 1 ರಿಂದ 12ನೇ ತರಗತಿವರೆಗಿನ ಪಠ್ಯದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಿದೆ.