ಲಾಕ್ ಡೌನ್ ಸಡಿಲಿಕೆ ಮಾಡಿ ಇಂದಿನಿಂದ ದೇವಾಲಯಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬಹುತೇಕ ದೇವಾಲಯಗಳಲ್ಲಿ ಈಗಾಗಲೇ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅನೇಕ ದೇವಾಲಯಗಳಲ್ಲಿ ಸದ್ಯಕ್ಕೆ ದೇವರ ದರ್ಶನ ಇರುವುದಿಲ್ಲ.
ಬೆಂಗಳೂರಿನ ಇಸ್ಕಾನ್ ದೇವಾಲಯವನ್ನು 15 ದಿನಗಳ ನಂತರ ತೆರೆಯಲಾಗುವುದು. ರಾಯರ ಬೃಂದಾವನ ದರ್ಶನಕ್ಕೆ ನಿರ್ಬಂಧ ಮುಂದುವರೆದಿದೆ. ಆಂಧ್ರ ಸರ್ಕಾರ ಅನುಮತಿ ನೀಡದ ಕಾರಣ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಸದ್ಯಕ್ಕೆ ಇರುವುದಿಲ್ಲ.
ಸಿಗಂದೂರು ಚೌಡೇಶ್ವರಿ ದೇವಾಲಯ ಕೂಡ ಓಪನ್ ಆಗಲ್ಲ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ದೇವಾಲಯಕ್ಕೆ ಬರುವ ಜನರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾದ ಹಿನ್ನೆಲೆಯಲ್ಲಿ ಇಂದು ದೇವಾಲಯ ತೆರೆಯದಿರಲು ನಿರ್ಧರಿಸಲಾಗಿದೆ.
ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಓಪನ್ ಆಗಲ್ಲ. ಆನ್ಲೈನ್ ಟಿಕೆಟ್ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ದೇಗುಲ ಓಪನ್ ಮಾಡುವ ಸಾಧ್ಯತೆ ಇದೆ. ಕೋಲಾರದ ಕಂಟೇನ್ಮೆಂಟ್ ಜೋನ್ ನಲ್ಲಿರುವ ಕೋಲಾರಮ್ಮ ದೇವಾಲಯವನ್ನು ಓಪನ್ ಮಾಡುವುದಿಲ್ಲ.
ಜೂನ್ 30 ರ ವರೆಗೆ ಕೊಪ್ಪಳ ಜಿಲ್ಲೆಯಲ್ಲಿರುವ ಹುಲಿಗೆಮ್ಮ ದೇವಾಲಯವನ್ನು ತೆರೆಯುವುದಿಲ್ಲ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಭಕ್ತರ ಆಗಮನ ಹಿನ್ನೆಲೆಯಲ್ಲಿ ಜೂನ್ 30ರ ವರೆಗೂ ಹುಲಿಗೆಮ್ಮ ದೇವಾಲಯ ಓಪನ್ ಆಗಲ್ಲ. ಸವದತ್ತಿ ಎಲ್ಲಮ್ಮ, ಚಿಂಚಳಿ ಮಾಯಕ್ಕದೇವಿ ದೇಗುಲಗಳನ್ನು ಓಪನ್ ಮಾಡುವುದಿಲ್ಲ. ಶೃಂಗೇರಿ ಶಾರದಾಂಬ ದೇಗುಲ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ತೆರೆಯುವುದಿಲ್ಲ. ಅಫಜಲಪುರ ತಾಲ್ಲೂಕಿನ ಗಾಣಗಾಪುರ ದತ್ತಾತ್ರೇಯ ದೇಗುಲ ತೆರೆಯುವುದಿಲ್ಲ. ಉಳಿದಂತೆ ಬಹುತೇಕ ದೇವಾಲಯಗಳಲ್ಲಿ ನಿಯಮಾನುಸಾರ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.