ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಶಾಲಾ ಶಿಕ್ಷಕರ ವರ್ಗಾವಣೆಗೆ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದಿಂದ ಅಧಿಸೂಚನೆ ಹೊರ ಬೀಳುತ್ತಿದ್ದಂತೆ ವರ್ಗಾವಣೆ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ವಿಧಾನಸಭೆ ಉಪಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಶಿಕ್ಷಕರ ವರ್ಗಾವಣೆಗೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ ಎರಡೂ ಸದನಗಳಲ್ಲಿ ಅಂಗೀಕಾರಗೊಂಡಿದ್ದು ರಾಜ್ಯಪಾಲರ ಅಂಕಿತ ಬಿದ್ದಿದೆ. ಶಿಕ್ಷಕರ ವರ್ಗಾವಣೆಗೆ ಕರಡು ನಿಯಮ ಸಿದ್ಧಪಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದ್ದು ಅಂತಿಮ ನಿಯಮ ಸಿದ್ಧಪಡಿಸಲಾಗಿದೆ. ಖಾಲಿ ಇರುವ ಶಿಕ್ಷಕರ ಹುದ್ದೆಗಳು, ಶಿಕ್ಷಕರ ಸೇವಾ ವಿವರ ಮೊದಲಾದ ಮಾಹಿತಿಗಳನ್ನು ಶಿಕ್ಷಣ ಇಲಾಖೆ ಕಲೆಹಾಕಿದ್ದು ಸರ್ಕಾರದಿಂದ ವರ್ಗಾವಣೆಗೆ ಹಸಿರು ನಿಶಾನೆ ಸಿಗುತ್ತಿದ್ದಂತೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಆದರೆ, ಪ್ರಸ್ತುತ ಕೊರೋನಾ ಕಾಣದಿಂದ ವಿದ್ಯಾಗಮ ಯೋಜನೆ, ಆನ್ಲೈನ್ ಕ್ಲಾಸ್ ಸೇರಿದಂತೆ ಮಕ್ಕಳ ಕಲಿಕೆಗೆ ಪೂರಕವಾದ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ. ಶಾಲೆ ಆರಂಭವಾದ ನಂತರ ವರ್ಗಾವಣೆ ಕೌನ್ಸೆಲಿಂಗ್ ನಡೆಸುವುದು ಕಷ್ಟವಾಗುತ್ತದೆ. ಸದ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವರ್ಗಾವಣೆ ವಿಳಂಬವಾಗಬಹುದು. ಶೈಕ್ಷಣಿಕ ವರ್ಷ ಆರಂಭವಾದಲ್ಲಿ ಈ ಸಲ ವರ್ಗಾವಣೆ ಇನ್ನೂ ವಿಳಂಬವಾಗಬಹುದು ಎಂದು ಹೇಳಲಾಗಿದೆ.