ಬೆಂಗಳೂರು: ಕೊರೋನಾ ಆತಂಕದ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕೊರೋನಾ ಕರ್ತವ್ಯದ ನಂತರ ಉಪಚುನಾವಣೆ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಮುಂದಾಗಿದೆ.
ಶಾಲೆಗಳಲ್ಲಿ ಸದ್ಯಕ್ಕೆ ತರಗತಿ ನಡೆಯುತ್ತಿಲ್ಲ. ಹೀಗಾಗಿ ಅನೇಕ ಶಿಕ್ಷಕರು ಕೊರೋನಾ ಕೆಲಸದಲ್ಲಿ ನಿರತರಾಗಿದ್ದಾರೆ. ವಿದ್ಯಾಗಮ ಯೋಜನೆ, ಆನ್ಲೈನ್ ಕ್ಲಾಸ್ ಮೊದಲಾದವುಗಳಲ್ಲಿ ಅನೇಕ ಶಿಕ್ಷಕರು ತೊಡಗಿಕೊಂಡಿದ್ದಾರೆ. ಕೆಲವರು ರಜೆಯಲ್ಲಿದ್ದಾರೆ.
ಕೊರೋನಾ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ. ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಕೆ. ಮಂಜುನಾಥ್ ಅವರು, ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಲ್ಲಿ ವಿದ್ಯಾಗಮ ಯೋಜನೆ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಇದ್ದಾರೆ ಎಂದು ಹೇಳಿದ್ದಾರೆ.
ಬೆಳಿಗ್ಗೆ ಆನ್ಲೈನ್ ಕ್ಲಾಸ್ ಮಾಡಿ ಮಧ್ಯಾಹ್ನ ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯತೆ ಎದುರಾಗಿದೆ. ಮತ್ತೆ ಕೆಲವು ಶಿಕ್ಷಕರಿಗೆ ರಜೆ ಸಿಕ್ಕಿದೆ. ಬಿಡುವಿಲ್ಲದೇ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ರಜೆ ನೀಡಬೇಕು. ಎಲ್ಲ ಶಿಕ್ಷಕರಿಗೂ ಕೊರೋನಾ ಕರ್ತವ್ಯ ಹಂಚಿಕೆ ಮಾಡಬೇಕು ಎಂದು ಹೇಳಲಾಗಿದೆ.