ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆ ಇಲ್ಲದೇ, ಮನೆಯಲ್ಲೇ ಉಳಿದ ಮಕ್ಕಳಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನ ಆಧಾರಿತ ವಿದ್ಯಾಗಮ ನಿರಂತರ ಕಲಿಕಾ ಯೋಜನೆ ಜಾರಿಗೆ ತರಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಕೈಗೊಂಡಿದೆ. ಎಲ್ಲಾ ಮಕ್ಕಳಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣ ಸಿಗುವಂತೆ ಮಾಡುವುದು ಈ ಮೂಲಕ ಮಕ್ಕಳ ಕಲಿಕೆಗೆ ತೊಡಕಾಗದಂತೆ ನೋಡಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ.
ಗ್ರಾಮ, ನಗರ-ಪಟ್ಟಣ, ಗುಡ್ಡಗಾಡು ಪ್ರದೇಶ, ಹಳ್ಳಿಗಾಡು, ಬೆಟ್ಟ ಅರಣ್ಯದಂಚಿನ ಗ್ರಾಮಗಳ ಮಕ್ಕಳಿಗೆ ಟಿವಿ ಫೋನ್ ಸೌಲಭ್ಯ ಇರುವುದಿಲ್ಲ. ಅವರ ಕಲಿಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವಿದ್ಯಾಗಮ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಪ್ರತಿ ಶಾಲೆಯ 20ರಿಂದ 25 ಮಕ್ಕಳಿಗೆ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕಲಿಕಾ ತರಗತಿ ಆರಂಭಿಸಲಾಗುವುದು. ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಲಾಗುವುದು. ಇಂಟರ್ನೆಟ್ ಇಲ್ಲದ ಮೊಬೈಲ್ ಫೋನ್ ಹೊಂದಿರುವವರಿಗೆ ತರಗತಿ ನಡೆಸಲಾಗುವುದು.
ಇಂಟರ್ನೆಟ್ ಇರುವ ಸ್ಮಾರ್ಟ್ಫೋನ್, ಕಂಪ್ಯೂಟರ್ ಹೊಂದಿರುವವರಿಗೆ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಒಂದರಿಂದ ಐದು, ಆರರಿಂದ ಎಂಟು ಹಾಗೂ 8ರಿಂದ 10ನೇ ತರಗತಿ ಮಕ್ಕಳನ್ನು ವಾಸಸ್ಥಳದ ಪ್ರದೇಶವನ್ನು ಆಧರಿಸಿ ಹಂಚಿಕೆ ಮಾಡಲಾಗಿದೆ. ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಪಾಲಕರಿಗೆ ಮಾರ್ಗದರ್ಶನ ನೀಡಲಾಗುವುದು. ವಿದ್ಯಾವಂತ ಯುವಕರು ಯುವತಿಯರನ್ನು ಗುರುತಿಸಿ ಸ್ವಯಂಸೇವಕರನ್ನಾಗಿ ನೇಮಿಸಲಾಗುವುದು.