ಬೆಂಗಳೂರು: ಕೊರೋನಾ ಲಾಕ್ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸರ್ಕಾರ ವಿನಾಯಿತಿ ನೀಡಲು ಮುಂದಾಗಿದೆ.
ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪ್ರವಾಸಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಜೂನ್ 10 ರಿಂದ ಪ್ಯಾಕೇಜ್ ಟೂರ್ ಆರಂಭವಾಗಲಿದೆ. ಅದೇ ರೀತಿ ಟೂರಿಸ್ಟ್ ವಾಹನಗಳ ತೆರಿಗೆಯನ್ನು ಶೇಕಡ 50ರಷ್ಟು ಮನ್ನಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಅಂತರರಾಜ್ಯ ಪ್ರವೇಶ ತೆರಿಗೆಯನ್ನು ರದ್ದುಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜೂನ್ ತಿಂಗಳ ಮೋಟಾರು ವಾಹನ ತೆರಿಗೆಯಲ್ಲಿ ಶೇಕಡ 50 ರಷ್ಟನ್ನು ರಾಜ್ಯ ಸರ್ಕಾರ ಮನ್ನಾ ಮಾಡಿದ್ದು, ಇತರೆ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ವಾಹನಗಳ ಪ್ರವೇಶಕ್ಕೆ ವಿಧಿಸುವ ಪ್ರವೇಶ ತೆರಿಗೆಯನ್ನು ರದ್ದುಮಾಡುವ ಚಿಂತನೆ ನಡೆಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಇಲಾಖೆ ಅಧಿಕಾರಿಗಳು ಚರ್ಚೆ ನಡೆಸಿದ್ದು, ಈ ಕುರಿತಾಗಿ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.
ಏಪ್ರಿಲ್, ಮೇ ತಿಂಗಳ ಪ್ರವಾಸಿ ವಾಹನಗಳ ಮೋಟಾರು ವಾಹನ ತೆರಿಗೆಯನ್ನು ಸಂಪೂರ್ಣ ರದ್ದು ಮಾಡಲಾಗಿದ್ದು ಜೂನ್ ತಿಂಗಳಲ್ಲಿ ಶೇಕಡ 50 ರಷ್ಟು ತೆರಿಗೆಯನ್ನು ಮನ್ನಾ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.