ದೇಶದಲ್ಲಿ ಕೊರೊನಾ ಎರಡನೆ ಅಲೆ ಭೀಕರವಾಗುತ್ತಿದ್ದಂತೆಯೇ ಆಮ್ಲಜನಕ ಪೂರೈಕೆ ಹಾಗೂ ವೆಂಟಿಲೇಟರ್ಗೆ ಅಭಾವ ಉಂಟಾಗುತ್ತಿದೆ. ಕೋವಿಡ್ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇರೋದ್ರಿಂದ ಸೌಮ್ಯ ಲಕ್ಷಣ ಹಾಗೂ ಲಕ್ಷಣವೇ ಇಲ್ಲದ ಸೋಂಕಿತರನ್ನ ಮನೆಯಲ್ಲೇ ಇರುವಂತೆ ಸೂಚನೆ ನೀಡಲಾಗ್ತಿದೆ.
ಆದರೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳೋದು ಅಂದರೆ ಎಷ್ಟು ಎಚ್ಚರದಿಂದ ಇದ್ದರೂ ಸಹ ಕಡಿಮೆಯೇ. ಅದರಲ್ಲೂ ಮನೆಯಲ್ಲೇ ವೈದ್ಯಕೀಯ ಆಮ್ಲಜನಕದ ಸಪೋರ್ಟ್ನಲ್ಲಿ ಇರುವವರು ಇನ್ನಷ್ಟು ಜಾಗೃತವಾಗಿ ಇರಬೇಕು.
ಈ ರೀತಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ವೈದ್ಯೆ ಡಾ. ಕಾಮ್ನಾ ಕಕ್ಕರ್ ಕೆಲ ಅಮೂಲ್ಯ ಸಲಹೆಗಳನ್ನ ನೀಡಿದ್ದಾರೆ.
ಆಕ್ಸಿಜನ್ ಸಾಚ್ಯುರೇಷನ್ 88 – 92 ಪ್ರತಿಶತ ಇರುವಂತೆ ನೋಡಿಕೊಳ್ಳಿ. ಇದು ಸುರಕ್ಷಿತ ಹಾಗೂ ಉತ್ತಮ ಕ್ರಮವಾಗಿದೆ. ನಿಮ್ಮ ಬೆರಳಿನ ನಾಡಿನಲ್ಲಿ 100 ಪ್ರತಿಶತ ಆಕ್ಸಿಜನ್ ಸ್ಯಾಚುರೇಷನ್ ಇರಲೇಬೇಕು ಎಂದು ಜಾಸ್ತಿ ಮಾಡಬೇಡಿ. ಇದರಿಂದ ಉಪಯೋಗಕ್ಕಿಂತ ಅಪಾಯವೇ ಜಾಸ್ತಿ. ಅಲ್ಲದೇ ಇದರಿಂದ ಸಿಲಿಂಡರ್ನಲ್ಲಿರುವ ಆಕ್ಸಿಜನ್ ಕೂಡಲೇ ಬೇಗನೇ ಖಾಲಿಯಾಗಲಿದೆ ಎಂದು ಟ್ವೀಟಾಯಿಸಿದ್ದಾರೆ.
ಸರಿಯಾದ ಅಳತೆಯ ಫೇಸ್ ಮಾಸ್ಕ್ನ್ನು ಧರಿಸಿ. ಮೂಗಿನ ಬಳಿ ಇರುವ ಮೆಟಲ್ ಕ್ಲಿಪ್ನ್ನು ಸರಿಯಾಗಿ ಒತ್ತಿಕೊಳ್ಳಿ. ಹಾಗೂ ಕೆನ್ನೆ ಭಾಗದಲ್ಲೂ ಬಿಗಿಯಾಗಿ ಇರುವಂತೆ ನೋಡಿಕೊಳ್ಳಿ.
ಮನೆಯಲ್ಲೇ ಆಮ್ಲಜನಕ ತೆಗೆದುಕೊಳ್ಳುತ್ತಿರುವ ವ್ಯಕ್ತಿಯ ಮೇಲೆ ನಿಗಾ ಇಟ್ಟುಕೊಳ್ಳಿ. ಈ ಕ್ಷಣದಲ್ಲಿ ಸೋಂಕಿತರನ್ನ ಆಸ್ಪತ್ರೆಗೆ ಸೇರಿಸಿ :
ಅವು ಯಾವುವು ಅಂದರೆ :
1. ಆಕ್ಸಿಜನ್ ಸಿಲಿಂಡರ್ ಅಳವಡಿಸಿದ ಬಳಿಕವೂ ರೋಗಿ ನರಳುತ್ತಿದ್ದರೆ ಆಸ್ಪತ್ರೆಗೆ ದಾಖಲು ಮಾಡಿ.
2. ತುಟಿ ಹಾಗೂ ನಾಲಗೆಯು ಗಾಢ ಬಣ್ಣಕ್ಕೆ ಮಾರ್ಪಾಡಾದಲ್ಲಿ.
3. ಸೋಂಕಿತ ವ್ಯಕ್ತಿಯು ಮೂರ್ಚೆ ಹೋದಲ್ಲಿ ಕೂಡಲೇ ಆಸ್ಪತ್ರೆ ದಾಖಲು ಮಾಡಬೇಕು.
4. ಸೋಂಕಿತ ವ್ಯಕ್ತಿ ತಿನ್ನಲು , ಕುಡಿಯಲು ಹಾಗೂ ಕುಳಿತುಕೊಳ್ಳಲು ಆಗದ ಸಂದರ್ಭದಲ್ಲಿ ಆಸ್ಪತ್ರೆಗೆ ಕೊಂಡೊಯ್ಯಿರಿ.
ಸೋಂಕಿತ ವ್ಯಕ್ತಿಯ ದೇಹದಲ್ಲಿ ಆಮ್ಲಜನಕ ಮಟ್ಟ ಏರಿಕೆ ಮಾಡಲು ಪ್ರೊನಿಂಗ್ ವಿಧಾನ ಬಳಸಿ. 2 ಗಂಟೆಗಳ ಕಾಲ ಅಂಗಾತ ಮಲಗಿ. ಇದಾದ ಮೇಲೆ 2 ಗಂಟೆಗಳ ಕಾಲ ಬೋರಲು ಮಲಗಿ. ಸುಸ್ತಾದಾಗಲೆಲ್ಲಾ ಯಾವುದಾದರೂ ಒಂದು ಮಗ್ಗುಲಲ್ಲಿ ಮಲಗಿ. ಅಲ್ಲದೇ ನಿಮ್ಮ ಆಹಾರವನ್ನ ಸರಿಯಾಗಿ ಸೇವಿಸಿ.