ಕೋಲಾರ: ಉದ್ದೇಶಪೂರ್ವಕವಾಗಿಯೇ ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೊಡ್ಡ ಕಲವಂಚಿ ಗ್ರಾಮದಲ್ಲಿ ಜಮೀನು ಸರ್ವೆಗೆ ತೆರಳಿದ್ದ ವೇಳೆ ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಎಂಬಾತ ಎದೆಗೆ ಚಾಕುವಿನಿಂದ ಇರಿದು ತಹಶೀಲ್ದಾರ್ ಕೊಲೆ ಮಾಡಿದ್ದಾನೆ. ಜಮೀನು ಸರ್ವೇ ಕಾರ್ಯದ ವೇಳೆ ಉದ್ದೇಶಪೂರ್ವಕವಾಗಿ ಚಾಕು ತಂದಿಟ್ಟುಕೊಂಡಿದ್ದ ವೆಂಕಟಾಚಲಪತಿ ತಹಶೀಲ್ದಾರ್ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸಂಜೆ 4.30 ರ ಸುಮಾರಿಗೆ ಜಮೀನು ಸರ್ವೆ ನಡೆಯುವ ಸಂದರ್ಭದಲ್ಲಿ ತಹಶೀಲ್ದಾರ್ ವಾಹನದ ಬಳಿ ಬಂದ ವೆಂಕಟಾಚಲಪತಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರನ್ನು ಬಂಗಾರಪೇಟೆ ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆಗಾಗಲೇ ಅವರು ತೀವ್ರ ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ನಂತರ ಕೋಲಾರ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ತಹಶೀಲ್ದಾರ್ ಕೊಲೆ ಮಾಡಿದ ವೆಂಕಟಾಚಲಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಉದ್ದೇಶಪೂರ್ವಕವಾಗಿ ನಡೆದ ಕೃತ್ಯ ಇದಾಗಿದೆ ಎಂದು ಹೇಳಲಾಗಿದೆ. ಅಪರಾಧ ಕೃತ್ಯಗಳಿಗೆ ಬಳಸುವಂತಹ ಚಾಕು ಹಿಡಿದುಕೊಂಡು ಸರ್ವೆ ಸ್ಥಳಕ್ಕೆ ಬಂದಿದ್ದ ವೆಂಕಟಾಚಲಪತಿ ಪೂರ್ವಯೋಜಿತ ಕೃತ್ಯವೆಸಗಿರಬಹುದೆಂದು ಹೇಳಲಾಗಿದೆ.