ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸ್ವತಂತ್ರ ದೇವ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರದಂದು ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದ ಅವರು ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸ್ವತಂತ್ರ ದೇವ್ ಸಿಂಗ್ ಅವರ ಅಧಿಕಾರವಧಿ ಜುಲೈ 16ರಂದು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ನೂತನ ಅಧ್ಯಕ್ಷರು ಆಯ್ಕೆಯಾಗುವವರೆಗೆ ಈ ಸ್ಥಾನದಲ್ಲಿ ಮುಂದುವರೆಯುವಂತೆ ಜೆ.ಪಿ. ನಡ್ಡಾ, ಸ್ವತಂತ್ರ ದೇವ್ ಸಿಂಗ್ ಅವರಿಗೆ ಸೂಚನೆ ನೀಡಿದ್ದಾರೆ.
ಸ್ವತಂತ್ರ ದೇವ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿರುವ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನು ಮೂರ್ನಾಲ್ಕು ದಿನಗಳಲ್ಲಿಯೇ ನೇಮಕಾತಿ ಆಗಲಿದೆ ಎಂದು ಹೇಳಲಾಗಿದ್ದು, ಇದಕ್ಕೂ ಮುನ್ನ ಬಿಜೆಪಿ ವರಿಷ್ಠರು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.