ಗ್ರಾಮೀಣ ಭಾಗದಲ್ಲಿ ಆಸ್ತಿ ಹಕ್ಕಿಗೆ ‘ಸ್ವಾಮಿತ್ವ’ ಯೋಜನೆ ಆರಂಭಿಸಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ 16 ಜಿಲ್ಲೆಗಳ 16,580 ಹಳ್ಳಿಗಳಲ್ಲಿ ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗುವುದು.
ಡ್ರೋನ್ ಆಧಾರಿತ ಸರ್ವೆ ನಡೆಸುವುದರಿಂದ ನಕ್ಷೆ ಹೆಚ್ಚು ನಿಖರವಾಗಿ ಇರಲಿದೆ. ಆಸ್ತಿ ತೆರಿಗೆಯನ್ನು ಕರಾರುವಕ್ಕಾಗಿ ನಿರ್ಧರಿಸಲು ಸಹಾಯಕವಾಗುತ್ತದೆ. ತೆರಿಗೆ ಸಂಗ್ರಹಣೆಯಿಂದ ಗ್ರಾಮಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗುತ್ತವೆ. ಅಲ್ಲದೆ, ದಾಖಲೆಗಳ ಖಾತ್ರಿ ಇರುವುದರಿಂದ ಸಾಲ ಪಡೆಯಲು ಮತ್ತು ಮಾರಾಟ ಮಾಡಲು ಅನುಕೂಲವಾಗುತ್ತದೆ. ಸರ್ಕಾರಿ ಆಸ್ತಿಯನ್ನು ಪರಭಾರೆ ಮಾಡಿದ್ದಲ್ಲಿ ಅದನ್ನು ವಶಕ್ಕೆ ಪಡೆಯಬಹುದಾಗಿದೆ.
ಕಂದಾಯ ಇಲಾಖೆ ಮತ್ತು ಭಾರತೀಯ ಸರ್ವೇಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ 82 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಲ್ಲಿದೆ. ತಮ್ಮ ಜಾಗದ ದಾಖಲೆ ಇಲ್ಲದವರಿಗೆ ಹಕ್ಕುಪತ್ರ ನೀಡುವ ಯೋಜನೆ ಇದಾಗಿದೆ. ಗ್ರಾಮೀಣ ಜನತೆಗೆ ಪೂರ್ವಿಕರಿಂದ ಬಂದ ಜಮೀನು ಅಥವಾ ಮನೆಯಲ್ಲಿ ಅವರು ವಾಸಿಸುತ್ತಿದ್ದರೂ ಅವರ ಆಸ್ತಿಯ ವಿಸ್ತೀರ್ಣ ಬಗ್ಗೆ ಮತ್ತು ದಾಖಲಾತಿಗಳು ಇರುವುದಿಲ್ಲ. ಗ್ರಾಮ ಪಂಚಾಯಿತಿ ದಾಖಲೆಗಳಲ್ಲಿ ಆಸ್ತಿ ಮಾಲೀಕತ್ವ ಹೊಂದಿರುವ ಬಗ್ಗೆ ಮಾಹಿತಿ ಇದ್ದರೂ ದಾಖಲೆ ಇಲ್ಲದ ಕಾರಣ ಸಾಲ ಪಡೆಯಲು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಸ್ವಾಮಿತ್ವ ಯೋಜನೆ ಈ ಗೊಂದಲ ಬಗೆಹರಿಸಲಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ವೆ ಆಫ್ ಇಂಡಿಯಾ ನೇತೃತ್ವದಲ್ಲಿ ಸ್ವಾಮಿತ್ವ ಯೋಜನೆ ರೂಪಿಸಿದ್ದು, ಕರ್ನಾಟಕದ 16 ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಉತ್ತರ ಕನ್ನಡ, ಯಾದಗಿರಿ, ರಾಮನಗರ, ತುಮಕೂರು, ರಾಯಚೂರು, ಮೈಸೂರು, ಕೊಪ್ಪಳ, ಕೊಡಗು, ಹಾಸನ, ಕಲಬುರ್ಗಿ, ಗದಗ, ದಾವಣಗೆರೆ, ವಿಜಯಪುರ, ಧಾರವಾಡ, ದಕ್ಷಿಣಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಲಾಗಿದೆ.