ಬೆಂಗಳೂರು: ಯಾರಿಗಾದರೂ ತೊಂದರೆ ಇದ್ದರೆ ಪರೀಕ್ಷೆಗೆ ಬರಬೇಡಿ. ಇವತ್ತೇ ಪರೀಕ್ಷೆ ಬರೆಯಬೇಕೆಂದಿಲ್ಲ ಎಂದು ಮಕ್ಕಳು ಹಾಗೂ ಪೋಷಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಿದ್ದ ಕೆಲ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಕೊರೋನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಮತ್ತೊಂದು ಅವಕಾಶ ನೀಡಲಾಗುವುದು ಎನ್ನಲಾಗಿದೆ.
ಈ ಕುರಿತಾಗಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಸಮಸ್ಯೆಯಿದ್ದರೆ ಪರೀಕ್ಷೆಗೆ ಬರಬೇಡಿ. ಯಾರಿಗಾದರೂ ತೊಂದರೆ ಇದ್ದರೆ ಪರೀಕ್ಷೆ ಬರೆಯಬೇಡಿ. ಪರೀಕ್ಷೆಯನ್ನು ಈಗಲೇ ಬರೆಯಬೇಕೆಂದೇನೂ ಇಲ್ಲ. ಮುಂದೆ ನಿಮಗೆ ಅವಕಾಶವಿದೆ. ಆಗಲೂ ಹೊಸದಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಅಧಿಕಾರಿಗಳ ಹೊರತು ಬೇರೆ ಯಾರು ಬರಬಾರದು. ಎಸ್ಎಸ್ಎಲ್ಸಿ ಗಣಿತ ವಿಷಯದ ಪರೀಕ್ಷೆಗೆ 8,08,650 ವಿದ್ಯಾರ್ಥಿಗಳು ಹಾಜರಾಗಬೇಕಿತ್ತು. ಇವರಲ್ಲಿ 7,91,987 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಶೇಕಡ 97.93ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.