ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಶಾಲೆಯನ್ನು ತೆರೆಯುವ ಧಾವಂತವಾಗಲಿ, ಪ್ರತಿಷ್ಠೆಯಾಗಲಿ ಸರ್ಕಾರಕ್ಕೆ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಶಾಲೆಗಳನ್ನು ಆರಂಭಿಸುವ ಕುರಿತಾಗಿ ಶಿಕ್ಷಕರ ಸಂಘಟನೆಗಳು, ಉಪನ್ಯಾಸಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳೊಂದಿಗೆ ವೆಬಿನಾರ್ ಸಂವಾದ ನಡೆಸಿದ ಅವರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗಳನ್ನು ಪ್ರಾರಂಭಿಸಲು ದಿಢೀರ್ ನಿರ್ಧಾರ ಕೈಗೊಳ್ಳುವುದಿಲ್ಲ. ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.
ಶಿಕ್ಷಣ ತಜ್ಞರು, ಪೋಷಕರು, ಶಿಕ್ಷಣ ಪ್ರೇಮಿಗಳು, ಶಿಕ್ಷಣ ಸಂಸ್ಥೆಯವರು, ಸಂಸದರು, ಶಾಸಕರೊಂದಿಗೆ ಚರ್ಚೆ ನಡೆಸಿ ಮಕ್ಕಳ ಹಿತಕ್ಕೆ ಪೂರಕವಾದ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಶಾಲೆಗಳನ್ನು ದಿಢೀರ್ ತೆರೆಯುವ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಆನ್ಲೈನ್ ಕ್ಲಾಸ್, ಚಂದನ ವಾಹಿನಿ, ವಿದ್ಯಾಗಮ ಯೋಜನೆ ಮೂಲಕ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದೇ ಪರ್ಯಾಯ ವ್ಯವಸ್ಥೆಯಲ್ಲ ಮತ್ತು ಪೂರಕ ವ್ಯವಸ್ಥೆಯೂ ಅಲ್ಲ ಎಂಬುದು ಗೊತ್ತಿದೆ. ಶಾಲಾ ತರಗತಿಯ ಕಲಿಕೆಯಷ್ಟು ಇವು ಪರಿಣಾಮಕಾರಿಯಾಗಿಲ್ಲ. ಹೀಗಿದ್ದರೂ, ಸದ್ಯಕ್ಕೆ ಶಾಲೆಗಳನ್ನು ಪುನರಾರಂಭಿಸುವುದಿಲ್ಲ ಎಂದು ಹೇಳಿದ್ದಾರೆ.