ಶಾಲಾ – ಕಾಲೇಜುಗಳನ್ನು ಆರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಆತುರವಾಗಿ ಶಾಲಾ – ಕಾಲೇಜುಗಳ ಆರಂಭ ಮಾಡುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲಾ – ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಅವರು ಹೇಳಿದ್ದಾರೆ.
ಶಿಕ್ಷಣ ತಜ್ಞರೊಂದಿಗೆ ಈ ಕುರಿತಂತೆ ಸಂವಾದ ನಡೆಸಲಾಗಿದೆ. ಶಾಲೆಗಳನ್ನು ಆರಂಭಿಸುವುದರ ಬಗ್ಗೆ ಯಾವುದೇ ಧಾವಂತ ಸರ್ಕಾರದ ಮುಂದಿಲ್ಲ. ಪೋಷಕರಿಗೆ ಯಾವುದೇ ಆತಂಕ ಬೇಡ. ಈ ಬಗ್ಗೆ ಶಾಸಕರು, ಸಂಸದರು, ಶಿಕ್ಷಣ ತಜ್ಞರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.
ಕೊರೊನಾ ಹೊತ್ತಲ್ಲಿ ಶಾಲೆಗಳನ್ನು ಆರಂಭಿಸುವ ಸಾಧ್ಯತೆ ಇದೆ. ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದ್ದು, ಪಾಳಿಯಲ್ಲಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು ಪೋಷಕರಿಗೆ ಆತಂಕ ಬೇಡ. ಶಾಲೆ, ಕಾಲೇಜ್ ಗಳನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.