ಬೆಂಗಳೂರು: ಕೊರೋನಾ ಕಾರಣದಿಂದ ಶಾಲೆಗಳು ಪ್ರಾರಂಭವಾಗುವುದು ಈ ವರ್ಷ ವಿಳಂಬವಾಗಿದೆ. ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಶಾಲೆಗಳ ಪುನಾರಂಭಕ್ಕೆ ಮಾರ್ಗಸೂಚಿ ಸಿದ್ಧಪಡಿಸಿದೆ. ವಿದ್ಯಾರ್ಥಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಪಾಳಿ ಪದ್ಧತಿಯಲ್ಲಿ ಶಾಲೆಗಳನ್ನು ನಡೆಸಲು ಸಲಹೆ ನೀಡಲಾಗಿದೆ.
ಬೆಳಗ್ಗೆ 8 ಗಂಟೆಯಿಂದ 12 ಗಂಟೆ ಮತ್ತು ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 40 ನಿಮಿಷ ಅವಧಿಯ 5 ತರಗತಿ ನಡೆಸಬಹುದಾಗಿದೆ. ಮೂರನೇ ತರಗತಿ ನಂತರ 30 ನಿಮಿಷ ವಿರಾಮ ನೀಡಬಹುದು. ದಿನ ಬಿಟ್ಟು ದಿನ ಪಾಳಿ ಪದ್ಧತಿಯಲ್ಲಿ ಶಾಲೆ ನಡೆಸಲು ತಿಳಿಸಲಾಗಿದೆ.
ಮಕ್ಕಳಿಗೆ ಮಾಸ್ಕ್ ಹಾಕಿ ಕಳುಹಿಸಬೇಕು. 3 ಗಂಟೆಗೊಮ್ಮೆ ಮಾಸ್ಕ್ ಬದಲಾಯಿಸಲು ಮತ್ತೊಂದು ಮಾಸ್ಕ್ ಕಳುಹಿಸಬೇಕು. ಪೋಷಕರು ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಹೇಳಲಾಗಿದೆ. ಮಾರ್ಗಸೂಚಿ ಸಿದ್ಧಪಡಿಸಿದ್ದು, ಈ ಬಗ್ಗೆ ಎಲ್ಲರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.