ಬೆಂಗಳೂರು: ಪ್ರಥಮ ಪಿಯುಸಿ ಫೇಲಾದ ವಿದ್ಯಾರ್ಥಿಗಳೆಲ್ಲರೂ ಪಾಸ್ ಆಗಲಿದ್ದಾರೆ. ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಜುಲೈ 16 ರಿಂದ 27 ರವರೆಗೆ ಪ್ರಥಮ ಪಿಯುಸಿ ಪೂರಕ ಪರೀಕ್ಷೆ ನಿಗದಿಯಾಗಿತ್ತು. ಕೊರೋನಾ ಕಾರಣದಿಂದ ಪೂರಕ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಸುಮಾರು 60 ಸಾವಿರ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬೇಕಿತ್ತು. ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸಿ ಜುಲೈ 30 ರಂದು ಫಲಿತಾಂಶ ಪ್ರಕಟಿಸಲು ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ಕರೋನಾ ಕಾರಣದಿಂದ ಪೂರಕ ಪರೀಕ್ಷೆಯನ್ನು ರದ್ದು ಮಾಡಲಾಗಿದ್ದು, ಅನುತ್ತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ದ್ವಿತೀಯ ಪಿಯುಸಿಗೆ ತೇರ್ಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಾಜರಾತಿ ಕೊರತೆ ಇಲ್ಲದ ಮತ್ತು ಪರೀಕ್ಷೆಗೆ ಅನಿವಾರ್ಯತೆಯಿಂದ ಗೈರುಹಾಜರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಪ್ರಥಮ ಕಿರು ಪರೀಕ್ಷೆಗೂ ಮೊದಲು ಕಿರು ಪರೀಕ್ಷೆಯನ್ನು ನಡೆಸಿ ಅವರ ಕಲಿಕೆಯ ಬುದ್ಧಿಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಹಾಜರಾತಿ ಕೊರತೆಯಿಂದ ವಾರ್ಷಿಕ ಪರೀಕ್ಷೆಗೆ ಹಾಜರಾಗದ ಹಾಜರಾಗಲು ಅನುಮತಿ ಪಡೆಯದ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.