ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ವಿದ್ಯಾರ್ಥಿಗಳಿಗೆ 26 ಗ್ರೇಸ್ ಮಾರ್ಕ್ಸ್ ನೀಡಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಸಂದೇಶ ಹರಿಬಿಡಲಾಗಿದೆ.
ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ಸಚಿವ ಸುರೇಶ್ ಕುಮಾರ್ ಘೋಷಣೆ ಮಾಡುವ ಸಂದರ್ಭದಲ್ಲಿ ಅವರ ಹೆಸರಿನ ನಕಲಿ ಟ್ವಿಟ್ಟರ್ ಖಾತೆಯಲ್ಲಿ 26 ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಮೌಲ್ಯಮಾಪಕರಿಗೆ ಸೂಚನೆ ನೀಡಲಾಗಿದೆ ಎಂದು ಸುಳ್ಳು ಸಂದೇಶ ಹರಿಬಿಡಲಾಗಿದೆ.
ಇದು ಗಮನಕ್ಕೆ ಬರುತ್ತಲೇ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.