ಬೆಂಗಳೂರು ಉತ್ತರ ತಾಲೂಕಿನ ಹಾರೋಕೇತನಹಳ್ಳಿಯಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಬೇರೆ ಜಾತಿ ಯುವಕನನ್ನು ಮದುವೆಯಾಗಿದ್ದರಿಂದ ಮನನೊಂದು ಸಂಪ್ ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಲಿಂಗಪ್ಪ(51) ಮತ್ತು ಚಂದ್ರಕಲಾ(45) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಹೇಳಲಾಗಿದೆ. ಹಾಸನ ಜಿಲ್ಲೆ ಹಾರನಹಳ್ಳಿಯ ದಂಪತಿ ಹಾರೋಕೇತನಹಳ್ಳಿಯಲ್ಲಿ ನೆಲೆಸಿದ್ದು, ಅವರ ಹಿರಿಯ ಪುತ್ರಿ ಖಾಸಗಿ ಕಂಪನಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಮೂಲದ ಯುವಕನನ್ನು ಪ್ರೀತಿಸುತ್ತಿರುವುದು ಗೊತ್ತಾಗಿ ಪೋಷಕರು ಇಬ್ಬರಿಗೂ ಬುದ್ಧಿಮಾತು ಹೇಳಿದ್ದಾರೆ.
ನಂತರ 5 ತಿಂಗಳು ಮನೆಯಲ್ಲೇ ಇದ್ದ ಯುವತಿ ಮತ್ತೆ ಕೆಲಸಕ್ಕೆ ಹೋಗುತ್ತಿದ್ದರಿಂದ ಆಕೆಗೆ ಮದುವೆ ಮಾಡಲು ಮನೆಯಲ್ಲಿ ವರನ ಹುಡುಕಾಟ ನಡೆದಿದೆ. ಆದರೆ, ಗುರುವಾರ ಕೆಲಸಕ್ಕೆ ಹೋದ ಮಗಳು ಮನೆಗೆ ಬಾರದೆ ಪ್ರೀತಿಸಿದ ಯುವಕನನ್ನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ. ಇದರಿಂದ ನೊಂದ ದಂಪತಿ ಕಿರಿಯ ಮಗಳು ಮಲಗಿದ ಬಳಿಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.