ಬೆಂಗಳೂರು: ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿರುವಾಗ ಕಾಂಗ್ರೆಸ್ ಸುಳ್ಳು ಆಪಾದನೆ ಮಾಡಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕಾಂಗ್ರೆಸ್ ನಾಯಕರ ಆಪಾದನೆಗಳಿಗೆ ತಿರುಗೇಟು ನೀಡಿದ್ದಾರೆ.
ಯಾವುದೇ ರಚನಾತ್ಮಕ ವಿರೋಧ ಪಕ್ಷಗಳು ಈ ಸಂದರ್ಭದಲ್ಲಿ ಇಂತಹ ಸುಳ್ಳು ಆಪಾದನೆ ಮಾಡುವುದಿಲ್ಲ, ಕಾಂಗ್ರೆಸ್ ಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕರು ತಮ್ಮ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ಇನ್ನೊಬ್ಬರ ತಟ್ಟೆಯಲ್ಲಿ ನೊಣ ಹುಡುಕಲು ಹೊರಟಿದ್ದಾರೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಹಗರಣ ನಡೆದಿದೆ ಎನ್ನುವುದು ಸಂಪೂರ್ಣ ಸುಳ್ಳು. ರಾಜ್ಯದ ಜನತೆ ಯಾವತ್ತೂ ನಿಮ್ಮನ್ನು ಕ್ಷಮಿಸುವುದಿಲ್ಲ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಇದು ಶೋಭೆ ತರುವುದಿಲ್ಲ. 13-14 ಆಯವ್ಯಯ ಮಂಡಿಸಿರುವ ಸಿದ್ದರಾಮಯ್ಯನವರಿಗೆ ಪ್ರಸ್ತಾವನೆಗೂ, ಖರ್ಚಿಗೂ ಅನುಮೋದನೆಗೂ ವ್ಯತ್ಯಾಸ ತಿಳಿದಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಗೆ 800 ಕೋಟಿ ರೂ. ಇಲಾಖೆ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಬಂದಿದೆ. ಅದಕ್ಕೆ ಅನುಮೋದನೆ ಇನ್ನೂ ದೊರೆತಿಲ್ಲ. ಸರ್ಕಾರ ಡ್ರ್ಯಾಗರ್ ಕಂಪನಿಯ ವೆಂಟಿಲೇಟರ್ ಖರೀದಿಸಿದೆ. ಅದು ವಿಶ್ವದಲ್ಲೇ ಅತ್ಯುತ್ತಮ ಬ್ರಾಂಡ್. ನಿಮ್ಮ ಮನೆಯಲ್ಲೇ ವೈದ್ಯರಿದ್ದಾರೆ. ಬೇರೆ ತನಿಖೆಯ ಅಗತ್ಯವಿಲ್ಲ ಅವರನ್ನೇ ಕೇಳಿದರೂ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಕೊರೋನಾ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಪುನಶ್ಚೇತನ ಮಾಡುತ್ತೇವೆ ಅಂತ ಉದ್ದೇಶ ಇದ್ದರೆ ಅದು ನಿಮ್ಮ ಭ್ರಮೆ. ಜನ ಎಲ್ಲಾ ಗಮನಿಸುತ್ತಿದ್ದಾರೆ. ನಿಮ್ಮನ್ನು ಕ್ಷಮಿಸುವುದಿಲ್ಲ. ಕಳೆದ 120 ದಿನಗಳಿಂದ ಯಾವ ರಜೆಯನ್ನೂ ತೆಗೆದುಕೊಳ್ಳದೆ, ಮನೆಯಲ್ಲಿ ಕೊರೋನಾ ಇದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸರ್ಕಾರವನ್ನು ಈ ರೀತಿ ಟೀಕಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಈ ವಯಸ್ಸಿನಲ್ಲೂ ಅತ್ಯಂತ ಸಕ್ರಿಯವಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕೆಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇಂತಹ ಸಮಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವುದನ್ನು ಬಿಟ್ಟು ಈ ರೀತಿಯ ಸುಳ್ಳು ಆಪಾದನೆ ಮಾಡಿದರೆ ಜನ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.