ಬೆಂಗಳೂರು: ಕೊರೋನಾ ಸೋಂಕಿತರು, ಲಕ್ಷಣ ಇರುವವರಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವುದು ಕಾನೂನು ಬಾಹಿರವಾಗಿದೆ. ಯಾವುದೇ ಆಸ್ಪತ್ರೆ ಚಿಕಿತ್ಸೆ ನಿರಾಕರಿಸುವುದು ಕಂಡುಬಂದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕಿತ್ಸೆ ಮತ್ತು ಇತರ ಯಾವುದೇ ದೂರುಗಳಿದ್ದರೆ ಸಾರ್ವಜನಿಕರು 1912 ಕ್ಕೆ ಕರೆ ಮಾಡಿದರೆ ಕೂಡಲೇ ಸ್ಪಂದಿಸಲಾಗುವುದು ಎಂದು ಹೇಳಿದ್ದಾರೆ.
ಕೊರೋನಾ ಸೋಂಕಿತರನ್ನು ದಾಖಲಿಸಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು, ಕೋವಿಡ್ ಕೇರ್ ಕೇಂದ್ರಗಳು ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕೊರೋನಾ ಸೋಂಕಿತರು ಅಥವಾ ಲಕ್ಷಣ ಇರುವವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ತಕ್ಷಣವೇ ರೋಗಿ ಅಥವಾ ರೋಗಿಯ ಸಂಬಂಧಿಕರು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಾಲ್ ಸೆಂಟರ್ 1912 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣವೇ ಲಭ್ಯವಿರುವ ಸಮೀಪದ ಆಸ್ಪತ್ರೆಗೆ ದಾಖಲಿಸಲು ಆಂಬುಲೆನ್ಸ್ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.