ಬೆಂಗಳೂರು: ಡ್ರಗ್ ಮಾಫಿಯಾ ಹಣ ನಮ್ಮ ಸರ್ಕಾರಕ್ಕೆ ಬಂದಿದೆ ಎಂಬ ಆರೋಪಕ್ಕೆ ಪುರಾವೆ ಒದಗಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಆದರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ..ಕುಮಾರಸ್ವಾಮಿ ಅವರಿಗೆ ಸವಾಲೆಸೆದಿದ್ದಾರೆ.
ಡ್ರಗ್ ಮಾಫಿಯಾದಿಂದ ತಮ್ಮ ಸರ್ಕಾರ ಬುಡಮೇಲಾಯಿತು ಎಂಬ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ನಾನು ಯಾವ ಮುಂಬೈಗೂ ಹೋಗಿಲ್ಲ. ಮಾಜಿ ಮುಖ್ಯಮಂತ್ರಿಗಳಾಗಿ ಇಂತಹ ಗಂಭೀರ ಆರೋಪ ಮಾಡಬಾರದು. ಆರೋಪ ಮಾಡಿದರೆ ಅದಕ್ಕೆ ಪುರಾವೆಯನ್ನೂ ನೀಡಬೇಕು. ಬಿಜೆಪಿ ಅಂತಹ ಅನೈತಿಕ ಕೆಲಸವನ್ನೂ ಎಂದೂ ಮಾಡಿಲ್ಲ. ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ. ತಾವು ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದ್ದಾರೆ.
ನಾನು ಮಾಜಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯ ಮಗನಲ್ಲ. ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಸಚಿವರು ಸರಣಿ ಟ್ವೀಟ್ ಮಾಡಿದ್ದಾರೆ.