ಬೆಂಗಳೂರು: ಮುಂದಿನ ವರ್ಷದ ಆರಂಭದಲ್ಲೇ ಕೋರೋಣ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ. ರಾಜ್ಯದ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ.
ಹೀಗೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ. ವರ್ಷಾರಂಭದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಕೊರೋನಾ ಲಸಿಕೆ ಸಿದ್ಧಪಡಿಸುತ್ತಿರುವ ಆಸ್ಟ್ರಾಜೆನಿಕಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಣೆಯ ಸೇರಂ ಇನ್ ಸ್ಟಿಟ್ಯೂಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಟ್ರಾಜೆನಿಕಾ ಸಂಸ್ಥೆ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪ್ರಯೋಗ ನಡೆಯುತ್ತಿದೆ. ಮೈಸೂರಿನ ಜೆಎಸ್ಎಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹಿಂದಿನ ಪ್ರಯೋಗಗಳು ಯಶಸ್ವಿಯಾಗಿದ್ದು ಮೂರನೇ ಹಂತದ ಪ್ರಯೋಗ ಪೂರ್ಣಗೊಂಡ ನಂತರ ವರ್ಷಾರಂಭದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.
ನವಂಬರ್, ಡಿಸೆಂಬರ್, ಜನವರಿ ಚಳಿಗಾಲದ ಅವಧಿಯಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದ್ದಾರೆ. ಲಸಿಕೆ ಲಭ್ಯವಾದ ನಂತರ ಮೊದಲು ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಆರೋಗ್ಯ ತಜ್ಞರು, ವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆಯರು ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ. ಮುಂದಿನ ಹಂತದಲ್ಲಿ ವೃದ್ಧರು, ಗರ್ಭಿಣಿಯರು, ಬಾಣಂತಿಯರು, ತೀವ್ರತರ ಕಾಯಿಲೆ ಇರುವವರು ಲಸಿಕೆ ಪಡೆಯಲಿದ್ದಾರೆ. ಲಸಿಕೆ ನೀಡಿದ 28 ದಿನಗಳಲ್ಲಿ ಪ್ರತಿಕಾಯಗಳು ಉತ್ಪಾದನೆಯಾಗಲಿವೆ ಎನ್ನಲಾಗಿದೆ.