ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ನಾರಾಯಣಮೂರ್ತಿ ತಮ್ಮ ಸರಳತೆಯಿಂದಲೇ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಇತ್ತೀಚೆಗೆ ತರಕಾರಿಗಳ ಗುಡ್ಡೆಗಳ ನಡುವೆ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“#DidYouKnow ಸುಧಾ ಮೂರ್ತಿ (2500 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಮಡದಿ) ತಮ್ಮ ಅಹಂಕಾರವನ್ನು ಇಳಿಸಿಕೊಳ್ಳಲು, ಪ್ರತಿ ವರ್ಷ ಒಂದು ದಿನದ ಮಟ್ಟಿಗೆ ವೆಂಕಟೇಶ್ವರ ದೇವಸ್ಥಾನದ ಎದುರು ಕುಳಿತುಕೊಂಡು ತರಕಾರಿ ಮಾರುತ್ತಾರೆ” ಎಂದು ಈ ಫೋಟೋಗೆ ಕ್ಯಾಪ್ಷನ್ ಸಹ ನೀಡಲಾಗಿದೆ.
ಆದರೆ ಅವರು ಅಲ್ಲಿ ಕುಳಿತಿರುವುದು ತರಕಾರಿ ಮಾರಾಟ ಮಾಡಲು ಅಲ್ಲ ಎಂದು ತಿಳಿದುಬಂದಿದೆ.
“ಈ ಸಂಪ್ರದಾಯ ನನ್ನ ಹೃದಯಕ್ಕೆ ಹತ್ತಿರವಾದುದಾಗಿದೆ. ಜಯನಗರ 5ನೇ ಬ್ಲಾಕ್‌ನಲ್ಲಿರುವ ನಮ್ಮ ಮನೆಯ ಬಳಿ ಇರುವ ರಾಘವೇಂದ್ರ ಮಠದ ಬಳಿ ನಾನು ಈ ತರಕಾರಿ ಗುಡ್ಡೆಗಳ ನಡುವೆ ಕುಳಿತುಕೊಂಡಿದ್ದು, ರಾಘವೇಂದ್ರ ರಾಯರ ಸಮಾರಾಧನೆಯ ಮೂರು ದಿನಗಳ ಮಟ್ಟಿಗೆ ದಾಸೋಹ ವ್ಯವಸ್ಥೆ ಮಾಡುತ್ತೇನೆ” ಎಂದು ಖುದ್ದು ಸುಧಾ ಮೂರ್ತಿ ಅವರೇ ಸ್ಪಷ್ಟನೆ ನೀಡಿದ್ದಾರೆ.
“ನಾನು ಹೀಗೆ ಮಾಡುವುದರಿಂದ ಒಂದು ರೀತಿಯ ಸಂತೃಪ್ತಿ ಸಿಗುತ್ತದೆ. ಇದರಿಂದ ನನಗೆ ಧ್ಯಾನ ಮಾಡಲು ಸಹಾಯವಾಗುತ್ತದೆ. ಈ ಸಂಪ್ರದಾಯವು ವ್ಯಕ್ತಿಗತ ಮಟ್ಟದಲ್ಲಿ ನನ್ನ ಹೃದಯಕ್ಕೆ ಹತ್ತಿರವಾದುದಾಗಿದೆ. ನಾನು ದೇವರ ಸೇವೆ ಮಾಡುತ್ತಿದ್ದೇನೆ ಎಂದು ನನಗೆ ನಿಜಕ್ಕೂ ಅನಿಸುತ್ತದೆ. ದೇವರ ಮುಂದೆ ನಾವೆಲ್ಲರೂ ಸಮ. ನೀವು ಅವನ ಮುಂದೆ ತಲೆಬಾಗಿಯೇ ನಿಲ್ಲಬೇಕಾಗುತ್ತದೆ. ನಾನು ಅಲ್ಲಿ ಸೇವೆ ಮಾಡುವಾಗ ಆಗುವ ಭಾವ ಅಂಥಾದ್ದು. ಆದ್ದರಿಂದ ನಾನು ಅಲ್ಲಿ ಇರುವಾಗ ನನ್ನ ಫೋಟೋ ತೆಗೆದುಕೊಳ್ಳಲು ಯಾರಿಗೂ ಅನುಮತಿ ಕೊಡುವುದಿಲ್ಲ. ನಾನು ಕೆಲಸ ಮಾಡುವುದಲ್ಲದೇ ಧ್ಯಾನ ಮಾಡುವುದರಲ್ಲೂ ನಿರತಳಾಗಿರುತ್ತೇನೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ.